

ನವದೆಹಲಿ: ಕರೊನಾ ವೈರಸ್ನಿಂದಾಗಿ ತತ್ತರಿಸಿರುವ ದೇಶದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬ್ರೇಕ್ ನೀಡಲಾಗಿದೆ. ಹೊರ ದೇಶದಿಂದ ಬರುವವರಿಗೂ ಸಹ ವೀಸಾ ರದ್ದು ಮಾಡಲಾಗಿದೆ. ಹೀಗಿರುವಾಗ ಪ್ರಸಿದ್ಧ ಐಪಿಎಲ್ ಪಂದ್ಯಾವಳಿ ನಡೆಯುತ್ತದೆಯೋ ಇಲ್ಲವೋ ಎನ್ನುವುದು ದೊಡ್ಡ ಚರ್ಚೆಯಾಗಿತ್ತು. ಇದೀಗ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿರುವುದಾಗಿ ಮಾಹಿತಿ ಲಭಿಸಿದೆ.
ನಿಗದಿಯಾಗಿರುವ ಪ್ರಕಾರ ಇದೇ ತಿಂಗಳ 29ನೇ ತಾರೀಖಿನಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ವಿದೇಶಿ ಆಟಗಾರರಿಲ್ಲದೆ ಪಂದ್ಯ ನಡೆಸಬೇಕು ಎಂದು ಹೇಳಲಾಗಿತ್ತು. ಹಾಗೆಯೇ ಪಂದ್ಯವನ್ನು ಕೇವಲ ಟಿವಿಗಳಲ್ಲಿ ಮಾತ್ರ ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿತ್ತು. ಆದರೆ ಇದೀಗ ಬಿಸಿಸಿಐ ಅಧಿಕಾರಿಗಳು ಪಂದ್ಯಾವಳಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಐಪಿಎಲ್ ಪಂದ್ಯಾವಳಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲು ಬಿಸಿಸಿಐ ಆಂತರಿಕ ನಿರ್ಧಾರ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವಾಗಿ ಬಿಸಿಸಿಐ ಅಧಿಕಾರಿಗಳು ಐಪಿಎಲ್ ತಂಡಗಳ ಮಾಲೀಕರನ್ನು ಶನಿವಾರದಂದು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಟಿವಿಯಲ್ಲಿ ಮಾತ್ರ ಐಪಿಎಲ್ ವೀಕ್ಷಣೆಗೆ ಎಲ್ಲಾ ಫ್ರಾಂಚೈಸಿಗಳು ಒಪ್ಪಿಕೊಂಡಿವೆ ಆದರೆ ವಿದೇಶಿ ಆಟಗಾರರನ್ನು ಹೊರೆತುಪಡಿಸಿ ಆಡುವುದಕ್ಕೆ ಒಪ್ಪಿಕೊಂಡಿಲ್ಲ. ಪ್ರತಿ ತಂಡದಲ್ಲಿ ನಾಲ್ಕು ಜನ ವಿದೇಶಿ ಆಟಗಾರರು ಇದ್ದರೆ ಮಾತ್ರವೇ ಅದು ಐಪಿಎಲ್ ಎನಿಸಿಕೊಳ್ಳುತ್ತದೆ ಎಂದು ಅವು ತಿಳಿಸಿವೆ.
ಏಪ್ರಿಲ್ 15ರಿಂದ ಐಪಿಎಲ್ ನಡೆಯಲಿದ್ದು, ಅದರಲ್ಲಿ ವೀದೇಶಿ ಆಟಗಾರರು ಆಡುತ್ತಾರೋ ಇಲ್ಲವೋ ಎನ್ನುವುದನ್ನು ಬಿಸಿಸಿಐ ತಿಳಿಸಬೇಕಿದೆ. ದೆಹಲಿಯಲ್ಲಿ ಐಪಿಎಲ್ ಪಂದ್ಯವನ್ನು ನಿಷೇಧಿಸಲಾಗಿದ್ದು, ದೆಹಲಿ ಹೊರೆತಾಗಿ ಬೇರೆ ರಾಜ್ಯಗಳಲ್ಲಿ ಐಪಿಎಲ್ ನಡೆಯಲಿದೆ. (ಏಜೆನ್ಸೀಸ್)