

ನವದೆಹಲಿ: ರೋಡೀಸ್ ರಿಯಾಲಿಟಿ ಶೋ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪ್ರತಿ ವರ್ಷ ಒಂದಿಷ್ಟು ಸ್ಪರ್ಧಿಗಳನ್ನಿಟ್ಟುಕೊಂಡು ಅವರ ಕೈಲಿ ಸಾಹಸಮಯ ಟಾಸ್ಕ್ಗಳನ್ನು ಮಾಡಿಸಿ ಮಾಸ್ ಶೋ ಆಗಿ ಮಿಂಚುವ ರಿಯಾಲಿಟಿ ಶೋ ಅದು. ಅದರ ಆಡಿಷನ್ ಕೂಡ ಅಷ್ಟೇ ಸಾಹಸಮಯವಾಗಿರುತ್ತದೆ. ಈ ಬಾರಿಯ ರೋಡೀಸ್ ಶೋನ ಆಡಿಷನ್ನಲ್ಲಿ ನಡೆದ ಸಣ್ಣ ಸನ್ನಿವೇಶವೊಂದು ಇದೀಗ ಸಖತ್ ವೈರಲ್ ಆಗಿದೆ.
ರೋಡೀಸ್ನ ಆಡಿಷನ್ನಲ್ಲಿ ಗ್ಯಾಂಗ್ ಲೀಡರ್ಗಳು ಕೇಳುವ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರಿಸಬೇಕು. ಅವರು ಹೇಳುವ ಟಾಸ್ಕ್ನ್ನು ಮಾಡಿ ತೋರಿಸಬೇಕು. ಈ ಮೂಲಕ ಗ್ಯಾಂಗ್ ಲೀಡರ್ಗಳ ಮೆಚ್ಚುಗೆ ಪಡೆಯುವ ಸ್ಪರ್ಧಿ ಮಾತ್ರ ಸ್ಪರ್ಧೆಯಲ್ಲಿ ಮುಂದುವರೆಯುತ್ತಾನೆ. ಇಂತಹ ಆಡಿಷನ್ನಲ್ಲಿ ಸ್ಪರ್ಧಿಯೊಬ್ಬ ತನ್ನ ಪ್ರೇಯಸಿಗೆ ಹೊಡೆದಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ಆಕೆ ತನ್ನನ್ನು ಪ್ರೀತಿಸುತ್ತಿದ್ದಾಗಲೇ ನಾಲ್ವರು ಯುವಕರ ಜತೆ ಪ್ರೀತಿಯ ನಾಟಕವಾಡುತ್ತಿದ್ದುದ್ದರಿಂದ ಆಕೆಗೆ ಹೊಡೆದಿದ್ದಾಗಿ ತಿಳಿಸಿದ್ದಾನೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಗ್ಯಾಂಗ್ ಲೀಡರ್ ನೇಹಾ ಧೂಪಿಯಾ, ಯಾವುದೇ ಹೆಣ್ಣು ಎಷ್ಟೇ ಜನ ಯುವಕರೊಂದಿಗೆ ಆಟವಾಡುತ್ತಿದ್ದರೂ ಆಕೆಗೆ ಹೊಡೆಯುವ ಹಕ್ಕು ಯಾವ ಹುಡುಗನಿಗೂ ಇಲ್ಲ ಎಂದು ಆ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿ ಸ್ಪರ್ಧಿಯನ್ನು ಬೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಳೆಯ ಸೀಸನ್ನ ಆಡಿಷನ್ ಒಂದರಲ್ಲಿ ಹೆಣ್ಣೊಬ್ಬಳು ಹುಡುಗನಿಗೆ ಹೊಡೆದೆ ಎಂದಿದ್ದಕ್ಕೆ ಸಂತಸದಿಂದ ಭೇಷ್ ಎಂದಿದ್ದ ಗ್ಯಾಂಗ್ ಲೀಡರ್ಗಳು, ಈ ಯುವಕನಿಗೆ ಈ ರೀತಿಯಲ್ಲಿ ಬೈದಿರುವುದುಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಣ್ಣಿಗೊಂದು ನ್ಯಾಯ ಗಂಡಿಗೊಂದು ನ್ಯಾಯ. ಇದೇನಾ ನೀವು ಕೇಳುವ ಸಮಾನತೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)