

ನವದೆಹಲಿ: ಮುಂಬರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಸ್ವತಃ ತಾನೇ ಸಂಘಟಿಸಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಕಳೆದ 13 ವರ್ಷಗಳಿಂದ ಟೂರ್ನಿಯ ಆಯೋಜನೆಯನ್ನು ನೋಡಿಕೊಳ್ಳುತ್ತಿದ್ದ ಬ್ರಿಟನ್‌ನ ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್ (ಐಎಂಜಿ) ಜತೆಗಿನ ಒಪ್ಪಂದವನ್ನು ಕಡಿದುಕೊಂಡಿದೆ. ಈ ವರ್ಷ ಬಿಸಿಸಿಐ ತನ್ನದೇ ವೃತ್ತಿಪರ ತಂಡದೊಂದಿಗೆ ಟೂರ್ನಿಯ ಆಯೋಜನೆಯನ್ನು ನಿರ್ವಹಿಸಲು ಬಯಸಿದೆ.
2008ರಿಂದ 10 ವರ್ಷಗಳ ಕಾಲ ಮೊದಲಿಗೆ ಐಎಂಜಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದ ಬಿಸಿಸಿಐ, ಇದಕ್ಕಾಗಿ ಪ್ರತಿ ವರ್ಷ 27 ಕೋಟಿ ರೂ. ಪಾವತಿಸುತ್ತಿತ್ತು. ಈ ನಡುವೆ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆದಾಗ 33 ಕೋಟಿ ರೂ. ನೀಡಿತ್ತು. 2017ರಲ್ಲಿ ಮತ್ತೆ 5 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಾಗ ವಾರ್ಷಿಕ ಮೊತ್ತದಲ್ಲಿ ಶೇ. 40 (12 ಕೋಟಿ ರೂ.) ಏರಿಕೆ ಮಾಡಿತ್ತು. ಇದೀಗ ಇನ್ನೂ 2 ವರ್ಷಗಳ ಒಪ್ಪಂದ ಬಾಕಿ ಇರುವಂತೆಯೇ ಬಿಸಿಸಿಐ ಅದನ್ನು ಮುರಿದುಕೊಂಡಿದೆ.
2021ರ ಐಪಿಎಲ್ ಟೂರ್ನಿ ಎಂದಿನಂತೆ ಏಪ್ರಿಲ್-ಮೇನಲ್ಲಿ ನಡೆಯುವ ನಿರೀಕ್ಷೆ ಇದ್ದರೂ, ಭಾರತದಲ್ಲೇ ನಡೆಯುವುದೇ ಅಥವಾ ಕಳೆದ ಬಾರಿಯಂತೆ ಯುಎಇಗೆ ಸ್ಥಳಾಂತರಗೊಳ್ಳುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ನಿರ್ಧರಿಸಲು ಬಿಸಿಸಿಐ, ಇನ್ನೂ ಒಂದು ತಿಂಗಳ ಕಾಲ ಕಾದು ನೋಡಲಿದೆ ಎನ್ನಲಾಗಿದೆ. ಈ ನಡುವೆ ಫೆಬ್ರವರಿಯಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಬೇಕಿದೆ.