

ಢಾಕಾ: ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿನಾಯಕ ಚತುರ್ಥಿಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಿಂದುಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದಾರೆ.
ಬಾಂಗ್ಲಾದೇಶದ ಕ್ರಿಕೆಟಿಗ ಲಿಟನ್ ದಾಸ್ ಕೂಡ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಣೇಶೋತ್ಸವವನ್ನು ಆಚರಿಸಿದರು. ತಮ್ಮ ಕುಟುಂಬದೊಂದಿಗೆ ವಿಘ್ನೇಶ್ವರನಿಗೆ ಪೂಜೆ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲಿಟನ್ ದಾಸ್ ಹಂಚಿಕೊಂಡಿದ್ದು, ಎಲ್ಲಡೆ ವೈರಲ್ ಆಗಿ, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ನಿಮಗೆಲ್ಲ ಗೊತ್ತಿರಬಹುದು ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ತೀವ್ರಗಾಮಿ ಇಸ್ಲಾಮಿಸ್ಟ್‌ಗಳು ಅನೇಕ ಹಿಂದುಗಳ ಮನೆಗಳನ್ನು ಧ್ವಂಸಗೊಳಿಸಿರುವ ಅನೇಕ ವರದಿಗಳಾಗಿವೆ. ಆದರೆ, ಅಂತಹ ಬೆದರಿಕೆಗಳನ್ನು ನಿರ್ಲಕ್ಷಿಸಿ, ಲಿಟನ್ ದಾಸ್ ಅವರು ಗಣೇಶನಿಗೆ ಪೂಜೆ ನೇರವೇರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಾಂಗ್ಲಾ ಹಿಂಸಾಚಾರ ಬಾಂಗ್ಲಾದೇಶದಲ್ಲಿ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಈ ಹಿಂದೆ ಭಾರಿ ಪ್ರತಿಭಟನೆ ನಡೆದಿತ್ತು. ಇದರ ನಡುವೆ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಈ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿ ನೂರಾರು ಮಂದಿ ಬಲಿಯಾದರು. ಅಲ್ಲದೆ, ಅನೇಕ ಹಿಂದುಗಳ ಮೇಲೂ ದಾಳಿ ನಡೆಯಿತು. ಹಿಂದು ದೇವಸ್ಥಾನಗಳನ್ನು ಕೆಡವಲಾಯಿತು.
ಹಿಂಸಾಚಾರ ಭುಗಿಲೇಳಲು ಕಾರಣ ಏನು?
1971ರ ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡವರ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 30% ಮೀಸಲಾತಿ ನೀಡಲಾಗಿತ್ತು. ಅಂದಿನಿಂದಲೂ ಇದಕ್ಕೆ ದೊಡ್ಡ ಮಟ್ಟದಲ್ಲಿ ಅಪಸ್ವರ ಕೇಳಿಬಂದಿತ್ತು. ಆದ್ರೆ, ಯಾವಾಗ ಬಾಂಗ್ಲಾ ಸರ್ಕಾರ ಈ ಯೋಜನೆಯನ್ನು ಅವರ ಮುಂದಿನ ತಲೆಮಾರಿಗೂ ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಟ್ಟಿತೋ ಅಲ್ಲೇ ಮೊದಲ ಕಿಡಿ ಹತ್ತಿಕೊಂಡಿತು. 1971ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸ್ವಾತಂತ್ರ್ಯ ಯುದ್ಧದಲ್ಲಿ ಪಾಲ್ಗೊಂಡಿದ್ದವರ ಕುಟುಂಬದ ಸದಸ್ಯರಿಗೆ 30% ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಯೋಜನೆಯನ್ನು ಬಾಂಗ್ಲಾ ಸರ್ಕಾರ ಜಾರಿಗೊಳಿಸಿತ್ತು. ಈ ವ್ಯವಸ್ಥೆಯು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದೆ. ಪ್ರಧಾನಿ ಹಸೀನಾ ತನ್ನ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ವಾದಿಸಿದರು. 1972ರಲ್ಲಿ ಸ್ಥಾಪಿಸಲಾದ ಕೋಟಾ ವ್ಯವಸ್ಥೆ ಅವಾಮಿ ಲೀಗ್ ಬೆಂಬಲಿಗರಿಗೆ ಸಹಾಯವಾಗುವಂತೆ ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಭಾರೀ ಅನ್ಯಾಯವಾಗಿದೆ ಮತ್ತು ಇತರ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಿತಿಗೊಳಿಸಲಾಗುತ್ತಿದೆ. ಕಷ್ಟಪಟ್ಟು ಮುಂದೆ ಬರುವವರಿಗೆ ಈ ಮೀಸಲಾತಿ ಅವಕಾಶ ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)