

ಬೆಂಗಳೂರು: ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿವಿ ಸಿಂಧು ಭಾನುವಾರ 25ನೇ ವಯಸ್ಸಿಗೆ ಕಾಲಿಟ್ಟರು. ಈ ವೇಳೆ ಅವರು ಹೈದರಾಬಾದ್ನ ಮನೆಯಲ್ಲಿ ಕುಟುಂಬದ ಸದಸ್ಯರ ಜತೆಗೂಡಿ ಜನ್ಮದಿನದ ಸಂಭ್ರಮವನ್ನು ಆಚಿರಿಸಿದರು. ಈ ವಿಶೇಷ ಕ್ಷಣದ ಚಿತ್ರಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಮಾರ್ಚ್ನಲ್ಲಿ ಬ್ರಿಟನ್ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಆಡಿ ತವರಿಗೆ ಮರಳಿದ ಬಳಿಕ ಬ್ಯಾಡ್ಮಿಂಟನ್ನಿಂದ ಸಂಪೂರ್ಣವಾಗಿ ದೂರ ಉಳಿದಿರುವ ಪಿವಿ ಸಿಂಧು, ಜನ್ಮದಿನದ ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳನ್ನೂ ತಿಳಿಸಿದ್ದಾರೆ. 'ನಾನಿಂದು ಜೀವನದ ಮತ್ತೊಂದು ವರ್ಷವನ್ನು ಪೂರ್ಣಗೊಳಿಸಿದೆ. ನಿಮ್ಮೆಲ್ಲರ ಶುಭಾಶಯಗಳಿಂದ ನನಗೆ ಈ ದಿನ ಮತ್ತಷ್ಟು ವಿಶೇಷವಾಗಿದೆ. ನೀವಿಲ್ಲದಿದ್ದರೆ ನನ್ನ ಬರ್ತ್ಡೇ ಮತ್ತೊಂದು ಸಾಮಾನ್ಯ ದಿನವಾಗಿರುತ್ತಿತ್ತು. ಇಂದು ಮಾತ್ರವಲ್ಲ ನನ್ನೊಂದಿಗೆ ಎಲ್ಲ ಸಮಯದಲ್ಲಿ ಜತೆಯಾಗಿ ನಿಂತಿರುವುದಕ್ಕೆ ಧನ್ಯವಾದಗಳು' ಎಂದು ಪಿವಿ ಸಿಂಧು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಮನೆಯಲ್ಲಿ ಬರ್ತ್ಡೇ ಪಾರ್ಟಿಗಾಗಿ ತಂದ ವಿವಿಧ ಕೇಕ್ಗಳನ್ನು ಸಿಂಧು ಕತ್ತರಿಸಿದರು. ಇದೇ ವೇಳೆ ಅಕ್ಕನ ಮಗನ ಬರ್ತ್ಡೇ ಕೂಡ ಇದ್ದ ಕಾರಣ ಇಬ್ಬರೂ ಜತೆಯಾಗಿ ಜನ್ಮದಿನದ ಸಂಭ್ರಮ ಆಚರಿಸಿದರು ಮತ್ತು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸಿಂಧು ಬರ್ತ್ಡೇಗಾಗಿ ಅವರ ಮನೆಯನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು.