ಬಾಬರ್​ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ: ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ

ವಿಜಯವಾಣಿ - 2024-09-17T173615.229
Published on

ಲಾಹೋರ್​: ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ನಾಯಕತ್ವ ವಹಿಸಿಕೊಂಡ ಬಾಬರ್ ಆಜಂ, ತಮ್ಮ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯುವಲ್ಲಿ ಮುಗ್ಗರಿಸಿದರು. ಮೊದಲ ಹಂತದಲ್ಲೇ ಟೂರ್ನಿಯಿಂದ ಹೊರಗುಳಿದ ಪಾಕ್​, ಬಾಬರ್ ನೇತೃತ್ವದಲ್ಲಿ ಗೆಲುವಿನ ಪತಾಕೆ ಹಾರಿಸುವಲ್ಲಿ ಭಾರೀ ಹೆಣಗಾಡಿತು. ಸತತ ಸೋಲು, ವ್ಯಾಪಕ ಟೀಕೆಗಳಿಂದ ಕುಗ್ಗಿರುವ ಆಜಂ, ಇಂದಿಗೂ ಟಿ20, ಏಕದಿನ ತಂಡಕ್ಕೆ ನಾಯಕನಾಗಿ ಮುಂದುವರೆದಿದ್ದಾರೆ. ಸದ್ಯ ಸೋಲಿನಿಂದ ಕಂಗೆಟ್ಟ ಬಾಬರ್​ ಬಗ್ಗೆ ಮಾಜಿ ಪಾಕ್ ಕ್ರಿಕೆಟಿಗ ರಶೀದ್​ ಲತೀಫ್ ಮಾತನಾಡಿ​, ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ.

"ನಾಯಕತ್ವವು ಬಾಬರ್​ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ. ಒಂದಷ್ಟು ವಿಚಾರಗಳಿಂದ ಆತನ ಮನಸ್ಸು ಸರಿಯಿಲ್ಲ. ಒತ್ತಡದಿಂದ ಹೊರಬರಲು ಬಹಳ ಕಸರತ್ತು ಮಾಡುತ್ತಿದ್ದಾನೆ. ಆದ್ರೆ, ಅದ್ಯಾವುದು ಸಾಥ್ ಕೊಡುತ್ತಿಲ್ಲ. ನಾಯಕತ್ವವನ್ನು ತೊರೆಯುವಂತೆ ಆತನನ್ನು ಒತ್ತಾಯಿಸಲಾಗಿತ್ತು. ಇದರಿಂದ ಬಾಬರ್​ ಮನಸ್ಸು ಸರಿಯಾಗಿಲ್ಲ. ವೈಫಲ್ಯಗಳೇ ಆತನ ಮಾನಸಿಕ ಒತ್ತಡಕ್ಕೆ ದೊಡ್ಡ ಕಾರಣವಾಗಿದೆ. ಇದರ ವಿರುದ್ಧ ಹೋರಾಡುವುದು ಆಜಂಗೆ ಕಷ್ಟಕರವಾಗಿದೆ ಎಂಬುದು ಸ್ಪಷ್ಟ" ಎಂದು ಲತೀಫ್ ಹೇಳಿದ್ದಾರೆ.

ಇನ್ನು ಈ ಮಧ್ಯೆ ಕ್ರಿಕೆಟ್ ಫ್ಯಾನ್ಸ್​ಗಳು ಹಾಗೂ ಮಾಜಿ ಕ್ರಿಕೆಟಿಗರು ಬಾಬರ್​ ನಾಯಕತ್ವದ ವಿರುದ್ಧ ಕಿಡಿಕಾರಿದ್ದನ್ನು ಗಮನಿಸಿದ ಸಲ್ಮಾನ್ ಮತ್ತು ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್, ಬಾಬರ್ ಆಜಂ ಬೆಂಬಲಕ್ಕೆ ನಿಂತಿದ್ದಾರೆ. ಇಂದಿಗೂ ಪಾಕಿಸ್ತಾನದಲ್ಲಿ ಅತ್ಯುತ್ತಮ ಬ್ಯಾಟರ್ ಯಾರಾದರೂ ಇದ್ದಾರೆ ಎಂದರೆ ಅದು ಆಜಂ. ಅವರು ಒಬ್ಬ ಸ್ಫೋಟಕ ಬ್ಯಾಟರ್​. ಶೀಘ್ರದಲ್ಲೇ ಹೆಚ್ಚು ರನ್ ಗಳಿಸುತ್ತಾರೆ ನಿರೀಕ್ಷಿಸಿ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.

"ಬಾಬರ್ ರನ್​ ಕೊಡುಗೆಗಳಿಗಿಂತ ಅವರ ವೈಫಲ್ಯಗಳನ್ನೇ ಹೆಚ್ಚು ಎತ್ತಿ ತೋರಿಸಲಾಗುತ್ತಿದೆ. ನಾಯಕತ್ವದಿಂದಾಗಿ ಬಾಬರ್ ಒತ್ತಡಕ್ಕೆ ಸಿಲುಕಿದ್ದಾರೆ. ಆತ ಒಬ್ಬ ಕ್ಲಾಸ್ ಪ್ಲೇಯರ್ ಮತ್ತು ಅತ್ಯುತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಗುಣಮಟ್ಟವನ್ನು ನಾನು ಅನುಮಾನಿಸಲಾರೆ. ಸದ್ಯ ಆಜಂ ತಮ್ಮ ಕ್ಯಾಪ್ಟನ್ಸಿಯ ಬಗ್ಗೆ ಯೋಚಿಸಬೇಕಾಗಿದೆ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net