ಗಾಂಧೀಜಿ ಭಾವನೆಯ ಮೂರ್ತರೂಪವಿರಲಿ: ಗಾಂಧಿಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಹೇಳಿಕೆ

Cement Sculpture Camp Mandya
Published on

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ವಿಚಾರಧಾರೆಗಳು ಪ್ರತಿಫಲಿಸುವಂತೆ ಶಿಲ್ಪಕಲಾಕೃತಿಗಳಿಗೆ ಜೀವ ತುಂಬಬೇಕು. ಅದರಂತೆ ಗಾಂಧೀಜಿ ಅವರ ಕುರಿತ ತಮ್ಮ ಭಾವನೆಗಳಿಗೆ ಕಲಾವಿದರು ಮೂರ್ತರೂಪ ನೀಡಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಹೇಳಿದರು.

ತಾಲೂಕು ಎಚ್.ಮಲ್ಲಿಗೆರೆಯ ಗಾಂಧಿಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಗಾಂಧೀಜಿ ಅವರ ವ್ಯಕ್ತಿ ವಿಚಾರ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳ ನಿರ್ಮಾಣ ಶಿಬಿರದಲ್ಲಿ ಮಾತನಾಡಿದರು. ಸಾವಿರಾರು ವರ್ಷದ ಇತಿಹಾಸವಿರುವ ಈ ನೆಲದ ಸಂಸ್ಕೃತಿ ಶ್ರೀಮಂತಿಕೆಯನ್ನು ಗಟ್ಟಿಗೊಳಿಸುವಲ್ಲಿ ಶಿಲ್ಪಕಲೆಗಳು ಮಹತ್ವದ ಪಾತ್ರವಹಿಸಿವೆ. ಶಿಲ್ಪಕಲಾಕೃತಿಗಳು ಉತ್ತಮವಾಗಿ ಮೂಡಿಬಂದರೆ ಅದರ ಸಂಪೂರ್ಣ ಶ್ರೇಯ ಕಲಾವಿದರರಿಗೆ ಸಲ್ಲುತ್ತದೆ. ಶಿಲ್ಪಕಲಾಕೃತಿಗಳ ಮೂಲಕ ಕಲಾವಿದರೂ ಕೂಡ ನೂರಾರು ವರುಷ ಬದುಕಿರುತ್ತಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಜಿಲ್ಲೆಗೊಂದು ಗಾಂಧಿ ಭವನ ಸ್ಥಾಪಿಸುತ್ತಿದೆ. ಆದರೆ, ಡಾ.ಜಿ.ಮಾದೇಗೌಡರು ಮೊದಲೇ ಮಂಡ್ಯ ಗಾಂಧಿಭವನ ಸ್ಥಾಪಿಸಿದ್ದರು. ಇದು ಮಾದೇಗೌಡರ ದೂರದೃಷ್ಟಿತ್ವಕ್ಕೆ ಸಾಕ್ಷಿ. ಮುಂದಿನ ದಿನಗಳಲ್ಲಿ ಗಾಂಧಿ ಗ್ರಾಮ ಎಲ್ಲರೂ ನೋಡುವಂತ ಆಕರ್ಷಣೀಯ ಕೇಂದ್ರವಾಗಿ ಮಾರ್ಪಾಡು ಆಗಲಿದೆ. ಮಾನವೀಯ ಮೌಲ್ಯಗಳ ಸಾರ ಆಗಿರುವ ಗಾಂಧೀಜಿ ಅವರ ಬದುಕು ಮತ್ತು ವಿಚಾರಧಾರೆಗಳನ್ನು ಎಲ್ಲರ ಹೃದಯ, ಮನಸ್ಸುಗಳಲ್ಲಿ ಬಿತ್ತುವ ಕೆಲಸವಾಗಬೇಕು. ಕನಿಷ್ಟ ಅಗತ್ಯಗಳಲ್ಲಿ ಗರಿಷ್ಟ ಬದುಕು ಕಟ್ಟಿಕೊಳ್ಳುವಂತೆಯೂ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ. ಹಿರಿಯರಲ್ಲಿ ಹೃದಯ ಶ್ರೀಮಂತಿಕೆ ಬೇಕಿದೆ. ಇಂದಿನ ಎಲ್ಲ ಬಿಕ್ಕಟ್ಟುಗಳಿಗೆ ಗಾಂಧಿ ತತ್ವ-ಗಾಂಧಿ ವಿಚಾರಧಾರೆಗಳನ್ನು ಅನುಸರಿಸಿದರೆ ಪರಿಹಾರವಿದೆ ಎಂದು ಹೇಳಿದರು.

ಶಿಬಿರ ಉದ್ಘಾಟಿಸಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಮಾತನಾಡಿ, ಶಿಲ್ಪಕಲಾಕೃತಿಗಳ ನಿರ್ಮಾಣ ಮಾಡುವ ಸಂಬಂಧ ಹೆಚ್ಚು ಶಿಬಿರಗಳನ್ನು ನಾಡಿನಾದ್ಯಂತ ಏರ್ಪಡಿಸಲು ಅಕಾಡೆಮಿ ವತಿಯಿಂದ ಯೋಜನೆ ರೂಪಿಸಲಾಗಿದೆ. ಅಕಾಡೆಮಿಗೆ ಶಿಲ್ಪಕಲಾ ಶಿಬಿರವನ್ನು ಆಯೋಜಿಸಿಕೊಡುವಂತೆ ಸಾಕಷ್ಟು ಕೋರಿಕೆಗಳು ಬರುತ್ತಿವೆ. ಅವುಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಲಾಗುತ್ತಿದೆ. ನಮ್ಮಲ್ಲಿ ಅತ್ತುತ್ತಮ ಶಿಲ್ಪಕಲಾವಿದರಿದ್ದು, ಅವರನ್ನು ಬಳಸಿಕೊಂಡು ರಾಜ್ಯಾದ್ಯಂತ ಶಿಲ್ಪಕಲಾ ಶಿಬಿರ ಆಯೋಜಿಸಲಾಗುವುದು. ನಾನು ಅಧ್ಯಕ್ಷನಾದ ಬಳಿಕ ಮಂಡ್ಯದಲ್ಲಿ ಮೊದಲಿಗೆ ಶಿಬಿರ ಆಯೋಜನೆಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಗಾಂಧಿ ಗ್ರಾಮದಲ್ಲಿ ಈಗಾಗಲೇ 3.5 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಗಾಂಧೀಜಿ ಅವರ ಮೌಲ್ಯಯುತ ಚಿಂತನೆಗಳನ್ನು ನಾಡಿನಾದ್ಯಂತ ಪಸರಿಸುವ ದೃಷ್ಟಿಯಿಂದ ಗಾಂಧಿ ಗ್ರಾಮವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರರ್ ಆರ್.ಚಂದ್ರಶೇಖರ್, ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್, ಅಕಾಡೆಮಿ ಸದಸ್ಯ ವೈ.ಕುಮಾರ್, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಬಿ.ಬಸವರಾಜು, ಅಂಜನಾ ಶ್ರೀಕಾಂತ್, ಎಂ.ರಾಜಣ್ಣ, ಎಚ್.ಮಲ್ಲಿಗೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಜೆ.ಭಾಗ್ಯಮ್ಮ, ಮಾಜಿ ಅಧ್ಯಕ್ಷ ಎಂ.ರಮೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net