ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಂ

Babar Azam
Published on

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನೈತಿಕ ಹೊಣೆ ಹೊತ್ತು ನಾಯಕತ್ವಕ್ಕೆ ಬಾಬರ್​ ಅಜಂ ರಾಜೀನಾಮೆ ನೀಡಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಪ್ರಮುಖ ತಂಡಗಳಲ್ಲಿ ಒಂದಾಗಿ ಸ್ಪರ್ಧೆಗಿಳಿದಿದ್ದ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಇದು ಪಾಕ್ ಮಾಜಿ ಆಟಗಾರರ, ಆಡಳಿತ ಮಂಡಳಿಯ ಹಾಗೂ ಪಾಕ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. 

ಸಾಕಷ್ಟು ಶ್ರಮವಹಿಸಿದ್ದೇನೆ

ಪಾಕ್​ ವಿಶ್ವಕಪ್​ ಅಭಿಯಾನ ಮುಗಿಸುವ ಮುನ್ನವೇ ಬಾಬರ್​ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇದೀಗ ವಿಶ್ವಕಪ್ ಅಭಿಯಾನವನ್ನು ಮುಗಿಸಿ ತಾಯ್ನಾಡಿಗೆ ಮರಳಿದ ಬಳಿಕ ಬಾಬರ್ ಆಝಂ, ಕ್ರಿಕೆಟ್​ನ ಎಲ್ಲಾ ಸ್ವರೂಪದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಬಾಬರ್​, 2019 ರಲ್ಲಿ ಪಾಕ್ ತಂಡವನ್ನು ಮುನ್ನಡೆಸುವ ಆಹ್ವಾನ ಬಂದಿದ್ದು, ನನಗೆ ಈಗಲೂ ಚೆನ್ನಾಗಿ ನೆನಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ನಾನು ಮೈದಾನದ ಒಳಗೆ ಮತ್ತು ಹೊರಗೆ ಅನೇಕ ಏರಿಳಿತಗಳನ್ನು ಅನುಭವಿಸಿದ್ದೇನೆ. ಆದರೆ ನಾನು ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಹೆಮ್ಮೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಸಲುವಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. 

ಆಟಗಾರರು, ತರಬೇತುದಾರರು ಮತ್ತು ನಿರ್ವಹಣೆಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್-ಬಾಲ್ ಮಾದರಿಯಲ್ಲಿ ನಾನು ನಂ. 1 ಸ್ಥಾನವನ್ನು ತಲುಪಿದೆ. ಈ ಪ್ರಯಾಣದಲ್ಲಿ ನನಗೆ ಬೆಂಬಲವಾಗಿ ನಿಂತ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇಂದು ನಾನು ಪಾಕಿಸ್ತಾನದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ. ಆದರೆ ಈ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ.

ಗರಿಗೆದರಿದ ಚಟುವಟಿಕೆಗಳು

ನಾನು ಎಲ್ಲಾ ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಈ ಮಹತ್ವದ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತ ಬಾಬರ್​ ಅಜಂ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್, ವೇಗಿ ಶಹೀನ್​ ಅಫ್ರಿದಿ ನಾಯಕತ್ವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net