ಪ್ರಧಾನಿ ಮೋದಿ ಅವರನ್ನು ನೋಡಿದರೆ ನನಗೆ ಸಲ್ಮಾನ್​ ಖಾನ್​ ನೆನಪಾಗುತ್ತಾರೆ: ಪ್ರಿಯಾಂಕ ಗಾಂಧಿ

Priyanka Gandhi
Published on

ಭೋಪಾಲ್: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರಧಾನಿ ಮೋದಿ ತಮ್ಮ ನೋವನ್ನು ತಾವೇ ತಾಳಲಾರದೆ ಅಸಮಾಧಾನಗೊಂಡಿದ್ದಾರೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ದಾತಿಯಾದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಂತ ಸಮಸ್ಯೆಗಳಿಂದ ನರಳಾಡುತ್ತಿರುವ ಪ್ರಥಮ ಪ್ರಧಾನಿ ಎಂದು ಭಾವಿಸುತ್ತೇನೆ. ಕರ್ನಾಟಕದಲ್ಲಿ ಚುನಾವಣೆ ನಡೆಯುವ ವೇಳೆ ಅಲ್ಲಿಗೆ ಹೋಗಿ ಅವರು ತಮ್ಮ ವಿರುದ್ಧ ಇಷ್ಟು ನಿಂದನೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದರು. ಅದೇ ರೀತಿ ಈಗ ಮಧ್ಯಪ್ರದೇಶದಲ್ಲೂ ಬಂದು ಈ ರೀತಿ ಮಾತನಾಡುತ್ತಿದ್ದಾರೆ.

ಪ್ರಧಾನಿ ಮೋದಿ ಹತಾಶೆಗೊಂಡಂತೆ ಖಾಣುತ್ತಿದ್ದು, ಇವರನ್ನು ನೋಡಿದರೆ ನನಗೆ ಸಲ್ಮಾನ್​ ಖಾನ್​ ನಟನೆಯ ತೇರೆ ನಾಮ್ ಚಿತ್ರ ನೆನಪಿಗೆ ಬರುತ್ತಿದೆ. ಒಮ್ಮೆ ನೀವು ಆ ಚಿತ್ರ ನೋಡಿ ಆ ನಂತರ ಪ್ರಧಾನಿಯವರ ಭಾಷಣವನ್ನು ಕೇಳಿ. ನಾನು ಏಕೆ ಹೀಗೆ ಹೇಳಿದೆ ಎಂದು ನಿಮಗೆ ಅರ್ಥವಾಗುತ್ತದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net