ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಬರ್​ಗಿಲ್ಲ ಓಪನಿಂಗ್​ ಆಡುವ ಅವಕಾಶ? ಪಾಕ್​ ತಂಡದಲ್ಲಿ ಗೊಂದಲ! Champions Trophy

ವಿಜಯವಾಣಿ - 2025-02-15T163828.344
Published on

Champions Trophy: ಇತ್ತೀಚೆಗೆಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಯಲ್ಲಿ ಪಾಕ್​ನ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್​ರನ್ನು ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿಸಿದ್ದರ ಬಗ್ಗೆ ಪಾಕಿಸ್ತಾನ ಮಾಜಿ ಹಿರಿಯ ಕ್ರಿಕೆಟಿಗ ಬಸಿತ್ ಅಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಯುವ ಆರಂಭಿಕ ಆಟಗಾರ ಸೈಮ್ ಅಯೂಬ್​, ಬಲ ಪಾದದ ಮೂಳೆ ಮುರಿತದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಕಾರಣದಿಂದ ಪಾಕ್​ ಮ್ಯಾನೇಜ್​ಮೆಂಟ್​, ಬಾಬರ್​ ಜತೆಗೆ ಫಖರ್ ಜಮಾನ್ ಅವರನ್ನು ಟಾಪ್​ ಆರ್ಡರ್​ನಲ್ಲಿ ಆಡಿಸಲು ನಿರ್ಧರಿಸಿತು. ತಂಡದ ಈ ನಿರ್ಧಾರ ಬಸಿತ್ ಅಲಿಗೆ ತೀವ್ರ ಅಸಮಾಧಾನ ಮೂಡಿಸಿತು. ಇವರಿಬ್ಬರ ಕಾಂಬಿನೇಷನ್​ ತ್ರಿಕೋನ ಸರಣಿಯಲ್ಲಿ ಫಲಿಸಲಿಲ್ಲ. ಕಾರಣ, ಆಡಿದ ಮೂರು ಪಂದ್ಯಗಳಲ್ಲಿ ಕೇವಲ 62 ರನ್ ಗಳಿಸಿದ ಬಾಬರ್​, ಉತ್ತಮ ಓಪನಿಂಗ್ ಆಟ ತೋರುವಲ್ಲಿ ಎಡವಿದರು. ಕರಾಚಿಯಲ್ಲಿ ನಡೆದ ಫೈನಲ್‌ನಲ್ಲಿ ಐದು ವಿಕೆಟ್‌ಗಳ ಸೋಲು ಸೇರಿದಂತೆ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಈ ಸರಣಿಯಲ್ಲಿ ಬಾಬರ್​ ತೋರಿದ ನೀರಸ ಪ್ರದರ್ಶನ ಸದ್ಯ ಬಸಿತ್ ಅಲಿ ಬೇಸರಕ್ಕೆ ಕಾರಣವಾಗಿದೆ.

ಇನ್ನು ಇದೇ ಫೆ.19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಾಬರ್ ಅವರನ್ನು ಆರಂಭಿಕ ಸ್ಥಾನಕ್ಕೆ ಬಡ್ತಿ ನೀಡುವ ಪಾಕಿಸ್ತಾನದ ನಿರ್ಧಾರವನ್ನು ಅಲಿ ಸುತಾರಾಮ್​ ಒಪಿಲ್ಲ. ಸದ್ಯ ಈ ವಿಷಯ ವ್ಯಾಪಕ ಟೀಕೆಗೆ ಗುರಿಯಾಗಿದೆ. “ತಂಡವು ತ್ರಿಕೋನ ಸರಣಿಯನ್ನು ಗೆದ್ದಿದ್ದರೆ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿತ್ತು. ಪ್ರತಿಯೊಬ್ಬ ಆಟಗಾರನ ಉತ್ಸಾಹನ್ನೂ ದುಪ್ಪಟ್ಟಾಗಿಸುತ್ತಿತ್ತು. ಆದರೆ, ಇಲ್ಲಿ ಬಾಬರ್ ಅಜಮ್​ರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಓಪನಿಂಗ್​ ಕಳಿಸುವ ನಿರ್ಧಾರ ಯಾರದ್ದು? ಈ ಸಲಹೆ ಕೊಟ್ಟವರಾರು? ಇದನ್ನು ಕೇಳಿ ನಿಜಕ್ಕೂ ನನಗೆ ಆಘಾತವಾಯಿತು. ಎಂತಹ ವಿಚಿತ್ರ ನಿರ್ಧಾರವಿದು” ಎಂದು ಅಲಿ ಮ್ಯಾನೇಜ್​ಮೆಂಟ್​ ನಿರ್ಧಾರಕ್ಕೆ ಕಿಡಿಕಾರಿದ್ದಾರೆ.

ಫೆ.19ರಂದು ಆತಿಥೇಯ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಶುಭಾರಂಭ ಮಾಡಲಿದ್ದು, ಇದೇ ಫೆ.23ರಂದು ದುಬೈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ, ಇದೊಂದು ಪಂದ್ಯ ನೋಡಲು ದಾಖಲೆ ಮಟ್ಟದಲ್ಲಿ ಈಗಾಗಲೇ ಟಿಕೆಟ್​ಗಳು ಖರೀದಿಯಾಗಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net