

ಮೆಲ್ಬೋರ್ನ್: ಕೋವಿಡ್-19ರ ಮಹಾಮಾರಿಯಿಂದಾಗಿ ಕ್ರಿಕೆಟ್ ಚಟುವಟಿಕೆ ಪುನಾರಂಭಗೊಳ್ಳುವ ಅನಿಶ್ಚಿತತೆ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ ತವರಿನಲ್ಲಿ ನಡೆಯಲಿರುವ ಮುಂಬರುವ ಭಾರತ ವಿರುದ್ಧದ ಸರಣಿಗೆ ವೇಳಾಪಟ್ಟಿ ಪ್ರಕಟಿಸಿದೆ. ಭಾರತ ವಿರುದ್ಧ 4 ಟೆಸ್ಟ್, ತಲಾ 3 ಟಿ20 ಹಾಗೂ ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಇದರೊಂದಿಗೆ ಕ್ರಿಕೆಟ್ ಚಟುವಟಿಕೆ ಪುನಾರಂಭ ಕುರಿತು ಹಲವು ದಿನಗಳಿಂದ ನಡೆಯುತ್ತಿದ್ದ ಹಗ್ಗಾಜಗ್ಗಾಟಕ್ಕೆ ಕಡೆಗೂ ಸಿಎ ಬ್ರೇಕ್ ಹಾಕಿದೆ. ಬೇಸಿಗೆ ಅವಧಿ ವೇಳಾಪಟ್ಟಿ ಪ್ರಕಟಿಸಿರುವ ಆಸ್ಟ್ರೇಲಿಯಾ, ಆಗಸ್ಟ್ 9ರಿಂದ ಜಿಂಬಾಬ್ವೆ ಪ್ರವಾಸದ ಮೂಲಕ ಕ್ರಿಕೆಟ್ ಚಟುವಟಿಕೆಗಳಿಗೆ ಚಾಲನೆ ನೀಡಲಿದೆ.
ಭಾರತ ತಂಡ ಪ್ರವಾಸದ ಮೊದಲಿಗೆ ಟಿ20 ಸರಣಿ ಆಡಲಿದ್ದು, ಅಕ್ಟೋಬರ್ 11 ರಂದು ಬ್ರಿಸ್ಬೇನ್ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಅ.14 ಮತ್ತು 17 ರಂದು 2ನೇ ಹಾಗೂ 3ನೇ ಪಂದ್ಯ ಕ್ರಮವಾಗಿ ಕ್ಯಾನ್ಬೆರಾ ಹಾಗೂ ಅಡಿಲೇಡ್ನಲ್ಲಿ ನಡೆಯಲಿವೆ. ಬಳಿಕ ಡಿಸೆಂಬರ್ 3ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಜನವರಿಯಲ್ಲಿ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಬೇಸಿಗೆ ಅವಧಿಯಲ್ಲಿ ಸಾಧ್ಯವಾದಷ್ಟು ಸರಣಿ ಆಯೋಜಿಸುವ ಗುರಿ ಹೊಂದಿದ್ದು, ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರಿಸ್ಥಿತಿಗೆ ತಕ್ಕಂತೆ ವೇಳಾಪಟ್ಟಿ ಬದಲಾಗಬಹುದೆಂದು ಸಿಎ ಸಿಇಒ ಕೆವಿನ್ ರೊರ್ಬಟ್ಸ್ ತಿಳಿಸಿದ್ದಾರೆ.
2021ರ ಟೂರ್ನಿಗೆ ಆಸೀಸ್ ಆಸಕ್ತಿ !
ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬದಲಿಗೆ 2021ರ ಟಿ20 ವಿಶ್ವಕಪ್ ಆಯೋಜಿಸಲು ಅನುವು ಮಾಡಿಕೊಡಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ), ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಮನವಿ ಸಲ್ಲಿಸಿದೆ. ಈ ಕುರಿತು ಐಸಿಸಿ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಗೆ (ಎಫ್ ಸಿಎ) ಇ-ಮೇಲ್ ಕಳುಹಿಸಿರುವ ಸಿಎ ಚೇರ್ಮನ್ ಎರಲ್ ಎಡ್ಡಿಂಗ್ಸ್, ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಷ್ಠಿತ ಟೂರ್ನಿ ಆಯೋಜಿಸುವುದು ಕಷ್ಟಕರ. ಇದರ ಬದಲಿಗೆ ಮುಂದಿನ ವರ್ಷ ನಿಗದಿಯಾಗಿರುವ ವಿಶ್ವಕಪ್ ಆಯೋಜಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಬಗ್ಗೆ ಸುಳಿವಿಲ್ಲ!: ಬೇಸಿಗೆ ಅವಧಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಈ ಅವಧಿಯಲ್ಲಿ ತವರಿನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸದ್ಯದ ವೇಳಾಪಟ್ಟಿ ಪ್ರಕಾರ ಟಿ20 ಸರಣಿ ಮುಕ್ತಾಯಗೊಂಡ ಬಳಿಕ ಭಾರತ ಸ್ವದೇಶಕ್ಕೆ ಆಗಮಿಸಬೇಕಿದೆ. ಒಂದು ವೇಳೆ ಟಿ20 ವಿಶ್ವಕಪ್ ನಡೆದರಷ್ಟೇ ಭಾರತ ತಂಡ ಆಸ್ಟ್ರೇಲಿಯಾದಲ್ಲೇ ಉಳಿಯಬೇಕಿದೆ. ಮತ್ತೆ ಡಿಸೆಂಬರ್ನಲ್ಲಿ ಟೆಸ್ಟ್ ಸರಣಿಗಾಗಿ ಆಸೀಸ್ಗೆ ವಿರಾಟ್ ಕೊಹ್ಲಿ ಪಡೆ ಪ್ರಯಾಣ ಬೆಳೆಸಬೇಕಿದೆ. ಡಿ.3 ರಿಂದ ಬ್ರಿಸ್ಬೇನ್ನಲ್ಲಿ ಮೊದಲ ಟೆಸ್ಟ್ ನಡೆದರೆ, ಅಡಿಲೇಡ್ನಲ್ಲಿ ಡಿ.11 ರಿಂದ 15ರವರೆಗೆ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ಮೆಲ್ಬೋರ್ನ್ನಲ್ಲಿ (ಡಿ.26-30) ಹಾಗೂ ಸಿಡ್ನಿ (ಜ.3-7) ಕ್ರಮವಾಗಿ 3ನೇ ಹಾಗೂ 4ನೇ ಟೆಸ್ಟ್ ನಡೆಯಲಿದೆ. ಕೋವಿಡ್-19ರ ಮಹಾಮಾರಿಯಿಂದ ತತ್ತರಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಆರ್ಥಿಕ ಪುನಶ್ಚೇತನಕ್ಕೆ ಭಾರತ ವಿರುದ್ಧದ ಸರಣಿ ಪ್ರಮುಖವಾಗಿದೆ. ಈ ಸರಣಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾ 1500 ಸಾವಿರ ಕೋಟಿ (300 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್)ಗಳಿಸುವ ನಿರೀಕ್ಷೆಯಲ್ಲಿದೆ. ಬಳಿಕ ಏಕದಿನ ಸರಣಿಯೂ ಜ.12 (ಪರ್ತ್), ಜ.15 (ಮೆಲ್ಬೋರ್ನ್) ಹಾಗೂ ಜ.17 (ಸಿಡ್ನಿ) ರಂದು ನಡೆಯಲಿವೆ.
ಐಪಿಎಲ್ ದಾರಿ ಸುಗಮ?
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಟಿ20 ವಿಶ್ವಕಪ್ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಜೂನ್ 10ರ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಮುಂದೂಡಿಕೆ ನಿರ್ಧಾರ ಕೈಗೊಂಡರೆ, ಐಪಿಎಲ್ ಹಾದಿ ಸುಗಮವಾಗಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯೂ ಮುಂದೂಡಿಕೆ ಅಥವಾ ರದ್ದುಗೊಂಡರಷ್ಟೇ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಬಹುದು.
ಸಿಎ ವಿರುದ್ಧ ಡಬ್ಲ್ಯುಎಸಿಎ ಗರಂ
ಆಸ್ಟ್ರೇಲಿಯಾದ ಟೆಸ್ಟ್ ತಾಣಗಳಲ್ಲಿ ಒಂದಾದ ಪರ್ತ್ ಮೈದಾನವನ್ನು ಕೈಬಿಟ್ಟು ಬ್ರಿಸ್ಬೇನ್ ಆಯ್ಕೆ ಮಾಡಿಕೊಂಡಿರುವುದಕ್ಕೆ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ (ಡಬ್ಲ್ಯುಎಸಿಎ) ಮುಖ್ಯಸ್ಥರಾದ ಕ್ರಿಸ್ಟಿನಾ ಮ್ಯಾಥ್ಯೂಸ್ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಗರಂ ಆಗಿದ್ದಾರೆ. ಬ್ರಿಸ್ಬೇನ್ನಲ್ಲಿ ಗಾಬಾ ಸ್ಟೇಡಿಯಂಗಿಂತ ನೂತನವಾಗಿ ನಿರ್ವಣವಾಗಿರುವ ಪರ್ತ್ ಸ್ಟೇಡಿಯಂ ಉತ್ತಮವಾಗಿದೆ. ಭಾರತ ವಿರುದ್ಧದ ಪಂದ್ಯದ ಬದಲಿಗೆ ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಪಂದ್ಯ ನಿಗದಿಪಡಿಸಿರುವುದು ಎಷ್ಟು ಸರಿ ಎಂದು ದೂರಿದ್ದಾರೆ.
ಭಾರತ ಮಹಿಳಾ ತಂಡದ ಪ್ರವಾಸ
ಭಾರತ ಮಹಿಳಾ ತಂಡವೂ ಪುರುಷರ ಸರಣಿ ಮುಕ್ತಾಯದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಜ.22 (ಕ್ಯಾನ್ಬೆರಾ), ಜ.25 (ಸೇಂಟ್ ಕ್ಲೀಡಾ) ಹಾಗೂ ಜ.27 ರಂದು (ಹೋಬಾರ್ಟ್) ಪಂದ್ಯಗಳು ನಡೆಯಲಿವೆ.