ಡಾ.ರಾಜ್​ ಕಪ್​ಗೆ ದುಬೈನಲ್ಲಿ ಹರಾಜು ಪ್ರಕ್ರಿಯೆ: ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಭಾಗಿ

Raj Cup
Published on

ಬೆಂಗಳೂರು: ಡಾ.ರಾಜ್ ಕಪ್ ಸೀಸನ್-6ಕ್ಕೆ ಮುಹೂರ್ತ ನಿಗದಿಯಾಗಿದ್ದು, ಇದಕ್ಕಾಗಿ ತಾರೆಯರು ತಯಾರಿ ಆರಂಭಿಸಿದ್ದಾರೆ. ಇದೇ ಜೂನ್ 17ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ಧ್, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡು ವಿವರ ತಿಳಿಸಿದರು.

ಇದೇ 17ರಂದು ದುಬೈನಲ್ಲಿ ರಾಜ್ ಕಪ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ 8 ತಂಡಗಳಿದ್ದು, ಈ ಬಾರಿ 12 ತಂಡಗಳಾಗಿವೆ. ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ನಿಯಮಗಳಿಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ ಎಂದು ರಾಜ್ ಕಪ್ ಆಯೋಜಕ ರಾಜೇಶ್ ಬ್ರಹ್ಮಾವರ್​ತಿಳಿಸಿದರು.

ರಾಜ್ ಕಪ್ ಸೀಸನ್-6 ಆರು ದೇಶಗಳಲ್ಲಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಇನ್ನೊಂದು ದೇಶದ ಆಯ್ಕೆ ಬಾಕಿ ಉಳಿದಿದೆ. ದುಬೈನಲ್ಲಿ ನಡೆಯುವ ಆಟಗಾರರ ಹರಾಜಿನಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಭಾಗಿಯಾಗಲಿದ್ದಾರೆ ಎಂದು ರಾಜೇಶ್ ತಿಳಿಸಿದರು.

ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಎನ್ನುವುದನ್ನು ಇದು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದು ನಟ ಅನಿರುದ್ಧ್ ಹೇಳಿದರು.

ಡಾ.ರಾಜ್ ಕಪ್ ಸೀಸನ್-6ರಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿವೆ. ಡಾಲಿ ಧನಂಜಯ್, ಅನಿರುದ್ಧ್, ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಷ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ.

ರಾಜ್ ಕಪ್ ಸೀಸನ್-6ರ ಲೀಗ್ ಮ್ಯಾಚ್​ಗಳು ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಪ್​ ಟೂರ್ನಿಗಾಗಿ ಸ್ಯಾಂಡಲ್​ವುಡ್ ತಾರೆಯರು, ತಂತ್ರಜ್ಞರು, ರಾಜಕೀಯ, ಮಾಧ್ಯಮದವರೂ ಭಾಗಿಯಾಗಲಿದ್ದಾರೆ ಎಂದು ಆಯೋಜಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net