ಏಷ್ಯಾಕಪ್​ ಟ್ರೋಫಿ, ಮೆಡಲ್​ ಹೊತ್ತೊಯ್ದ ಮೊಹ್ಸಿನ್​ ನಖ್ವಿ! ಈಗ ಎಲ್ಲಿದೆ ಕಪ್​? ಹೀಗಿದೆ ಹೊಸ ವರದಿ | Asia Cup Trophy

ವಿಜಯವಾಣಿ (9)
Published on

Asia Cup Trophy: ನಿನ್ನೆ (ಸೆ.28) ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿತು. ಮೂರನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾಗೆ ಗೆಲುವಿನ ಪಟ್ಟವೇನೋ ಲಭಿಸಿತು. ಆದರೆ, ಟ್ರೋಫಿ ಮತ್ತು ಮೆಡಲ್​ಗಳು ಮಾತ್ರ ಸಿಕ್ಕಿಲ್ಲ. ಅದಕ್ಕೆ ಕಾರಣ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ.

ಫೈನಲ್​ಗೆ ಬರುವ ಮೊದಲೇ ನಾವು ಫೈನಲ್​ನಲ್ಲಿ ಗೆದ್ದರೆ, ಖಂಡಿತ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದರು. ಅಂತೆಯೇ, ಅಂತಿಮ ಹಣಾಹಣಿಯಲ್ಲಿ ಪಾಕ್​ನ ಮಣಿಸಿದ ಭಾರತ ತಂಡ, ಟ್ರೋಫಿಯನ್ನು ಪಡೆಯಲು ವೇದಿಕೆ ಮೇಲೆ ಹೋಗಲಿಲ್ಲ. ಬದಲಿಗೆ ಮೈದಾನದಲ್ಲೇ ಮೊಬೈಲ್ ನೋಡುತ್ತ ಕುಳಿತ್ತಿದ್ದರು. ಇದು ಮೊಹ್ಸಿನ್​ ನಖ್ವಿ ಕೋಪಕ್ಕೆ ಕಾರಣವಾಯಿತು. ಕೂಡಲೇ ಏಷ್ಯಾಕಪ್ ಟ್ರೋಫಿ ಮತ್ತು ಮೆಡಲ್​ಗಳನ್ನು ತನ್ನೊಂದಿಗೆ ಹೊತ್ತೊಯ್ದ ನಖ್ವಿ, ಅದನ್ನು ಇಲ್ಲಿಯವರೆಗೂ ಆಟಗಾರರಿಗೆ ವಾಪಾಸ್​ ಮಾಡಿಲ್ಲ.

ಸದ್ಯ ಈ ವಿಚಾರ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈಗಲಾದರೂ ಟೀಮ್ ಇಂಡಿಯಾಗೆ ಗೆದ್ದ ಟ್ರೋಫಿ ಸಿಕ್ಕಿತೇ? ಪ್ರಸ್ತುತ ಟ್ರೋಫಿ ಎಲ್ಲಿದೆ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಭಾರತ ತಂಡಕ್ಕೆ ಶೀಘ್ರವೇ ಟ್ರೋಫಿಯನ್ನು ಹಸ್ತಾಂತರಿಸುವಂತೆ ದೂರು ಸಲ್ಲಿಸಿದೆ. ಈ ಮಧ್ಯೆ, ಎಸಿಸಿ ಟೀಮ್ ಇಂಡಿಯಾಗೆ ಟ್ರೋಫಿ ಮತ್ತು ಮೆಡಲ್​ಗಳನ್ನು ಕೊಡಲಿದೆಯೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಸದ್ಯಕ್ಕೆ ಯಾವ ಮಾಹಿತಿಯೂ ಲಭಿಸಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net