ಪಾಕಿಸ್ತಾನವನ್ನು ಸೋಲಿಸಲು ಟೀಮ್​ ಇಂಡಿಯಾದ ಈ ಇಬ್ಬರು ಆಟಗಾರರು ಸಾಕಂತೆ! Asia Cup 2025

Asia Cup 2025
Published on

Asia Cup 2025 : ಏಷ್ಯಾ ಕಪ್-2025 ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿಯೇ ಟೀಮ್ ಇಂಡಿಯಾ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್​ ನೇತೃತ್ವದ ಭಾರತ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಮೊದಲ ಪಂದ್ಯದಲ್ಲಿ ಏಕಪಕ್ಷೀಯವಾಗಿ ಸುಲಭ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಆರಂಭದಲ್ಲಿ ಯುಎಇ ತಂಡವನ್ನು ಕೇವಲ 57 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ, ಕೇವಲ 4.3 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿತು. ಈ ಮೂಲಕ ಟೀಮ್​ ಇಂಡಿಯಾ ಮತ್ತೊಮ್ಮೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಮತ್ತೊಂದೆಡೆ, ಈ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಯುಎಇ ಮತ್ತು ಅಫ್ಘಾನಿಸ್ತಾನದೊಂದಿಗೆ ಪಾಕಿಸ್ತಾನ ಟಿ20 ತ್ರಿಕೋನ ಸರಣಿಯನ್ನು ಆಡಿತು. ಆದಾಗ್ಯೂ, ಈ ಎರಡೂ ತಂಡಗಳ ವಿರುದ್ಧ ಪಾಕ್​ ತಂಡ ಅಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ, ಪಾಕ್​ ತಂಡ ಓಮನ್ ವಿರುದ್ಧ 93 ರನ್‌ಗಳಿಂದ ಜಯಗಳಿಸಿತು.

ಈಗ, ಏಷ್ಯಾ ಕಪ್ ಪಂದ್ಯಾವಳಿಯ ಭಾಗವಾಗಿ, ದೀರ್ಘಕಾಲದ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 14 ರಂದು ಮುಖಾಮುಖಿಯಾಗಲಿವೆ. ಈ ಸಂದರ್ಭದಲ್ಲಿ, ಭಾರತದ ಮಾಜಿ ಕ್ರಿಕೆಟಿಗರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಖಂಡಿತವಾಗಿಯೂ ಪಾಕಿಸ್ತಾನವನ್ನು ಭರ್ಜರಿಯಾಗಿ ಸೋಲಿಸುತ್ತದೆ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ಟೀಮ್​ ಇಂಡಿಯಾ ಬಲವನ್ನು ಗಮನಿಸಿದರೆ, ಭಾರತದ ಎರಡನೇ ಹಂತದ ತಂಡ ಅಥವಾ ಬಿ ಟೀಮ್​ ಈ ಸ್ಪರ್ಧೆಗೆ ಸಮರ್ಪಕವಾಗಿದೆ ಎಂದು ನಂಬಲಾಗಿದೆ. ಅಂದರೆ, ಪ್ರಿಯಾಂಶ್ ಆರ್ಯ ಮತ್ತು ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿಯಂತಹ ಐಪಿಎಲ್ ತಾರೆಗಳನ್ನು ಹೊಂದಿರುವ ಬಿ ಟೀಮ್​, ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಬಹುದು ಎಂಬ ಅಭಿಪ್ರಾಯಗಳೂ ಇವೆ.

ಇನ್ನು ಏಷ್ಯಾ ಕಪ್​ ಪಂದ್ಯಾವಳಿ ಆರಂಭವಾಗುವ ಮೊದಲು, ಟೀಮ್ ಇಂಡಿಯಾ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ಒಂದು ವಿನಂತಿ ಮಾಡಿಕೊಂಡರು. ಅದೇನೆಂದರೆ, ದಕ್ಷಿಣ ಆಫ್ರಿಕಾವನ್ನು ಈ ಪಂದ್ಯಾವಳಿಯಲ್ಲಿ ಸೇರಿಸಿ, ಆಫ್ರೋ-ಏಷ್ಯಾ ಕಪ್ ಮಾಡಬೇಕೆಂದು ಬಯಸಿದ್ದಾರೆ. ಮುಖ್ಯ ತಂಡದೊಂದಿಗೆ ಭಾರತದಿಂದ 'ಎ' ತಂಡವನ್ನು ಕಣಕ್ಕಿಳಿಸಬೇಕೆಂದು ಅಶ್ವಿನ್​ ಬಯಸಿದ್ದಾರೆ. ಆಗ ಮಾತ್ರ ಸ್ವಲ್ಪ ಸ್ಪರ್ಧೆ ಇರುತ್ತದೆ ಎಂದು ಅಶ್ವಿನ್​ ನಂಬಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವೇಗಿ ಅತುಲ್ ವಾಸನ್ ಇತ್ತೀಚೆಗೆ ಭಾರತದ ಎರಡನೇ ಹಂತದ ತಂಡ ಅಥವಾ ಬಿ ಟೀಮ್​, ಪ್ರಸ್ತುತ ಪಾಕಿಸ್ತಾನ ತಂಡವನ್ನು ಸೋಲಿಸಲು ಸಾಕು ಎಂದು ಹೇಳಿಕೆ ನೀಡಿದ್ದಾರೆ. 90ರ ದಶಕದಲ್ಲಿ ಪಾಕಿಸ್ತಾನ ಬಲಿಷ್ಠ ತಂಡವಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆ ತಂಡ ದುರ್ಬಲವಾಗಿ ಕಾಣುತ್ತದೆ. ಪ್ರಸ್ತುತ, ಪಾಕಿಸ್ತಾನವನ್ನು ಸೋಲಿಸಲು ಭಾರತ-'ಬಿ' ತಂಡ ಸಾಕು ಎಂದಿದ್ದಾರೆ.

ಆದರೆ, ಈ ಟೂರ್ನಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ನನ್ನನ್ನು ಕಾಡುವುದಿಲ್ಲ. ಏಕೆಂದರೆ ನಾನು ಅವರ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ, ನಾನು ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಬಗ್ಗೆ ಯೋಚಿಸುತ್ತಲೇ ಇರುತ್ತೇನೆ. ಕಾಲಕ್ಕೆ ತಕ್ಕಂತೆ ಮುಂದುವರಿಯುವುದು ಉತ್ತಮ ಎಂದು ಅತುಲ್ ವಾಸನ್ ನ್ಯೂಸ್ 18ಗೆ ತಿಳಿಸಿದರು.

ಅಂದಹಾಗೆ, 2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ಕೊಹ್ಲಿ ಮತ್ತು ರೋಹಿತ್ ಅಂತಾರಾಷ್ಟ್ರೀಯ ಟಿ20ಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಅಲ್ಲದೆ, ಈ ದಂತಕಥೆಗಳು ಇತ್ತೀಚೆಗೆ ಟೆಸ್ಟ್‌ಗಳಿಗೂ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net