ಕೆಂಪು ಸಮುದ್ರದಲ್ಲಿ ಕೇಬಲ್​ ಕಡಿತ: ಭಾರತ ಸೇರಿ ಮಧ್ಯಪ್ರಾಚ್ಯ ದೇಶಗಳಲ್ಲಿ ಇಂಟರ್ನೆಟ್ ಸೇವೆಯಲ್ಲಿ ಅಡಚಣೆ! Red Sea Cable cut

Red Sea Cable cut
Published on

Red Sea Cable cut : ಕೆಂಪು ಸಮುದ್ರ (ರೆಡ್​ ಸೀ) ದಲ್ಲಿ ಕೇಬಲ್ ಕಡಿತದ ಪರಿಣಾಮ ಭಾರತ, ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಇಂಟರ್ನೆಟ್ ಸೇವೆಗಳಲ್ಲಿ ಭಾರಿ ಅಡಚಣೆ ಉಂಟಾಗಿದೆ.

ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿರುವ ಅಸೋಸಿಯೇಟೆಡ್​ ಪ್ರೆಸ್​ ವರದಿಯ ಪ್ರಕಾರ, ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗೊಂದು ತನ್ನ ಲಂಗರನ್ನು ಎಳೆದುಕೊಂಡು ಹೋದ ಪರಿಣಾಮ ಸಮುದ್ರದೊಳಗಿನ ಹಲವಾರು ಇಂಟರ್ನೆಟ್ ಕೇಬಲ್‌ಗಳನ್ನು ಹಾನಿಗೊಳಿಸಿದೆ. ಇದರಿಂದಾಗಿ ಇಂಟರ್ನೆಟ್​ ಸೇವೆಯಲ್ಲಿ ಈ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಅನೇಕ ಕೇಬಲ್‌ಗಳು ಹೆಚ್ಚು ಆಳವಿಲ್ಲದ ನೀರಿನಲ್ಲಿ ಇರುವುದರಿಂದ ಕೆಂಪು ಸಮುದ್ರವು ಹಡಗು ಪ್ರಯಾಣಕ್ಕೆ ವಿಶೇಷವಾಗಿ ದುರ್ಬಲವಾಗಿರುತ್ತದೆ. ಹಡಗು ಪ್ರಯಾಣದ ವೇಳೆ ಅದರ ಲಂಗರುಗೆ ಕೇಬಲ್​ಗಳು ಸಿಲುಕುವುದರಿಂದ ಅವುಗಳು ಸುಲಭವಾಗಿ ಹಾನಿಗೊಳಗಾಗುತ್ತವೆ ಎಂದು ಕೆಂಟಿಕ್‌ನ ಇಂಟರ್ನೆಟ್ ವಿಶ್ಲೇಷಣಾ ನಿರ್ದೇಶಕ ಡೌಗ್ ಮಾಡೋರಿ ಸುದ್ದಿ ಸಂಸ್ಥೆ ಎಪಿಗೆ ತಿಳಿಸಿದ್ದಾರೆ.

ವಾಣಿಜ್ಯ ಹಡಗೊಂದು ಆಕಸ್ಮಿಕವಾಗಿ ತನ್ನ ಲಂಗರನ್ನು ಬೀಳಿಸಿ ನಾಲ್ಕು ಕೇಬಲ್‌ಗಳನ್ನು ಎಳೆದಾಡಿರಬಹುದು ಎಂದು ಊಹಿಸಲಾಗಿದೆ. ಸದ್ಯ ಹಾನಿಗೊಳಗಾದ ಕೇಬಲ್‌ಗಳನ್ನು ಸರಿಪಡಿಸಲು ಹಲವಾರು ವಾರಗಳು ತೆಗೆದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆಂದು ದುಬೈನ ಪ್ರತಿಷ್ಠಿತ ಮಾಧ್ಯಮ ಖಲೀಜ್ ಟೈಮ್ಸ್ ವರದಿ ಮಾಡಿದೆ. ಅಲ್ಲದೆ, ದುರಸ್ತಿಗೆ ಸಾಕಷ್ಟು ಸಮಯ ಏಕೆ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಹಲವಾರು ಕಾರಣಗಳನ್ನು ಸಹ ಪಟ್ಟಿ ಮಾಡಿದೆ.

ಸೀಮಿತ ಕಂಪನಿಗಳಿಂದ ದುರಸ್ತಿ ಕಾರ್ಯ

ಸೈಬರ್ ಸೆಕ್ಯುರಿಟಿ ಕಂಪನಿ ಪಾಲೋ ಆಲ್ಟೊದ ಕನ್ಸಲ್ಟಿಂಗ್ ಸಿಸ್ಟಮ್ಸ್ ಇಂಜಿನಿಯರ್ ಯಾಸರ್ ಸಯೀದ್ ಅವರ ಹೇಳಿಕೆಯನ್ನು ಖಲೀಜ್​ ಟೈಮ್ಸ್​ ಉಲ್ಲೇಖಿಸಿದೆ. ಅವರ ಹೇಳಿಕ ಪ್ರಕಾರ, ಜಗತ್ತಿನಲ್ಲಿ ಕೇವಲ ಮೂರು ಅಥವಾ ನಾಲ್ಕು ಕಂಪನಿಗಳು ಮಾತ್ರ ಇಂತಹ ಆಳ ಸಮುದ್ರದ ಕೇಬಲ್‌ಗಳನ್ನು ದುರಸ್ತಿ ಮಾಡಲು ಸಜ್ಜಾಗಿವೆ. ಸಂಪನ್ಮೂಲಗಳ ಕೊರತೆಯಿಂದಾಗಿ ಬಹು ಅಡೆತಡೆಗಳು ಸಂಭವಿಸಿದಾಗ ದುರಸ್ತಿ ಕಾರ್ಯ ವಿಳಂಬವಾಗುತ್ತದೆ.

ಸಮುದ್ರದೊಳಗಿನ ಸಂಕೀರ್ಣ ಕಾರ್ಯಾಚರಣೆಗಳು

ಹಾನಿಗೊಳಗಾದ ಕೇಬಲ್‌ಗಳು ಸಾಗರ ತಳದ ಆಳದಲ್ಲಿ ಬಿದ್ದಿರುವುದರಿಂದ ದುರಸ್ತಿ ಹೆಚ್ಚು ತಾಂತ್ರಿಕವಾಗಿರುತ್ತದೆ. ಅಂತಹ ಕೇಬಲ್ ಅನ್ನು ಸರಿಪಡಿಸಲು ಅತ್ಯುನ್ನತ ತಂತ್ರಜ್ಞಾನದ ಅಗತ್ಯವಿದೆ. ಅದರಲ್ಲೂ ವಿಶೇಷ ಫೈಬರ್ ಡೈವರ್‌ಗಳು ಬೇಕಾಗುತ್ತಾರೆ. ಅವರು ಸಮುದ್ರದ ಆಳಕ್ಕೆ ಹೋಗಿ, ನಿಖರವಾದ ಕಟ್ ಅನ್ನು ಪತ್ತೆಹಚ್ಚಿ ಸರಿಪಡಿಸಬಹುದು ಎಂದು ಸಯೀದ್ ಅವರು ಖಲೀಜ್ ಟೈಮ್ಸ್​ಗೆ ತಿಳಿಸಿದ್ದಾರೆ.

ಬಾಹ್ಯ ಕಾರಣಗಳು

ಹಡಗುಗಳ ಲಂಗರು ಹಾಕುವುದು, ನೈಸರ್ಗಿಕ ವಿಕೋಪಗಳು ಅಥವಾ ಅಪರೂಪದ ಸಂದರ್ಭಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಯಿಂದಾಗಿ ಕೇಬಲ್​ಗಳಿಗೆ ಹಾನಿ ಉಂಟಾಗುತ್ತದೆ ಎಂದು ಸಿಸ್ಕೊದ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಸ್ವಪ್ನೇಂದು ಎಂ. ಅವರು ಖಲೀಜ್ ಟೈಮ್ಸ್‌ಗೆ ತಿಳಿಸಿದ್ದಾರೆ. ಇನ್ನು ಹಾನಿಯ ನಿಖರವಾದ ಕಾರಣ ಮತ್ತು ಸ್ಥಳವನ್ನು ಗುರುತಿಸುವುದು ನಿರ್ಣಾಯಕ ಆದರೆ, ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಪುನಃಸ್ಥಾಪನೆ ಮತ್ತಷ್ಟು ವಿಳಂಬಗೊಳಿಸುತ್ತದೆ ಎಂದು ಸ್ವಪ್ನೆಂದು ಹೇಳಿದ್ದಾರೆ. ಅಂದಹಾಗೆ, ಫೈಬರ್ ಕೇಬಲ್‌ಗಳು ಕಾಲಾನಂತರದಲ್ಲಿ ನೈಸರ್ಗಿಕ ಅವನತಿಗೆ ಗುರಿಯಾಗುತ್ತವೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೇಬಲರ್​ಗಳ ಸವೆತವು ಅವುಗಳ​ ನಿರ್ವಹಣೆಯನ್ನು ಕಷ್ಟಕರವಾಗಿಸುತ್ತದೆ ಮತ್ತು ಪ್ರತಿ ಐದು ರಿಂದ ಹತ್ತು ವರ್ಷಗಳಿಗೊಮ್ಮೆ ಇಂತಹ ಘಟನೆಗಳು ಮರುಕುಳಿಸುತ್ತವೆ ಎಂದಿದ್ದಾರೆ.

ಕೇಬಲ್​ ಕಡಿತ ಎಲ್ಲೆಲ್ಲಿ ಪರಿಣಾಮ ಬೀರಿದೆ?

ಕೆಂಪು ಸಮುದ್ರದಲ್ಲಿ ಉಂಟಾಗಿರುವ ಕೇಬಲ್​ ಕಡಿತವು ಕನಿಷ್ಠ ನಾಲ್ಕು ಪ್ರಮುಖ ಕೇಬಲ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ. ಆಗ್ನೇಯ ಏಷ್ಯಾ–ಮಧ್ಯಪ್ರಾಚ್ಯ–ಪಶ್ಚಿಮ ಯುರೋಪ್ 4, ಭಾರತ-ಮಧ್ಯಪ್ರಾಚ್ಯ-ಪಶ್ಚಿಮ ಯುರೋಪ್, ಫಾಲ್ಕನ್ ಜಿಸಿಎಕ್ಸ್ ಮತ್ತು ಯುರೋಪ್ ಇಂಡಿಯಾ ಗೇಟ್‌ವೇ ಮೇಲೆ ಪರಿಣಾಮ ಬೀರಿದೆ. ಆರಂಭದಲ್ಲಿ ಸೌದಿ ಅರೇಬಿಯಾದ ಜೆಡ್ಡಾದ ಕರಾವಳಿಯಲ್ಲಿ ಕಡಿತ ಸಂಭವಿಸಿದೆ ಎಂದು ನಂಬಲಾಗಿತ್ತು.

ಈ ಬಗ್ಗೆ ಅಂತಾರಾಷ್ಟ್ರೀಯ ಕೇಬಲ್ ಸಂರಕ್ಷಣಾ ಸಮಿತಿಯ ಜಾನ್ ವ್ರೊಟೆಸ್ಲಿ ಅವರು ಎಪಿ ಜತೆ ಮಾತನಾಡಿದ್ದು, ವಾಣಿಜ್ಯ ಹಡಗು ಚಟುವಟಿಕೆಯು "ಹಾನಿಗೆ ಸಂಭವನೀಯ ಕಾರಣ" ಎಂದು ಹೇಳಿದರು. ವಾರ್ಷಿಕ ಕೇಬಲ್ ಘಟನೆಗಳಲ್ಲಿ ಸುಮಾರು 30% ರಷ್ಟು ಎಳೆದ ಹಡಗಿನ ಆ್ಯಂಕರ್‌ಗಳಿಂದ ಉಂಟಾಗುತ್ತವೆ. ಇದು ವರ್ಷಕ್ಕೆ ಸರಿಸುಮಾರು 60 ದೋಷಗಳಿಗೆ ಕಾರಣವಾಗುತ್ತದೆ ಎಂದು ವ್ರೊಟೆಸ್ಲಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net