ಬೆಂಗಳೂರಿನಲ್ಲಿ 11 ವರ್ಷ ಕಳೆದ ರಷ್ಯಾ ಮಹಿಳೆ ಭಾರತದ ಬಗ್ಗೆ ಆಡಿದ್ದು ಮೂರು ಮುತ್ತಿನಂಥ ಮಾತುಗಳು! Russian Woman

Russian Woman
Published on

Russian Woman : ಭಾರತದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇಡೀ ಜಗತ್ತಿಗೆ ವೈವಿಧ್ಯತೆ ಅಂದರೆ ಏನು ಎಂಬುದನ್ನು ತೋರಿಸಿದ ನೆಲ. ಸಂಸ್ಕೃತಿ, ಆಚರಣೆ, ಮಾನವೀಯತೆ, ಗೌರವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಭಾರತ ಮಾತೆಯ ಭೂಮಿ ಸ್ವರ್ಗಕ್ಕಿಂತ ಮಿಗಿಲು. ವಿದೇಶಿಗರಿಗೂ ಭಾರತ ಅಚ್ಚುಮೆಚ್ಚಿನ ತಾಣ ಎಂಬುವುದರಲ್ಲಿ ಸಂದೇಹವೇ ಇಲ್ಲ. ಪ್ರತಿ ವರ್ಷ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬಂದು ಹೋಗುತ್ತಾರೆ. ಬಂದವರು ಇಲ್ಲಿನ ಆತಿಥ್ಯ ಕಂಡು ಮೂಕವಿಸ್ಮಿತರಾಗುತ್ತಾರೆ. ಅದಕ್ಕೆ ತಾಜಾ ಉದಾಹರಣೆ ವೈರಲ್​ ಆಗುತ್ತಿರುವ ರಷ್ಯಾದ ಮಹಿಳೆ.

ಹೌದು, ಕೇವಲ 1 ವರ್ಷದ ಇರಲು ಭಾರತಕ್ಕೆ ಬಂದ ರಷ್ಯಾ ಮಹಿಳೆ ಇಲ್ಲಿ ಕಳೆದಿದ್ದು ಬರೋಬ್ಬರಿ 11 ವರ್ಷ. ಆ ಮಹಿಳೆಯ ಹೆಸರು ಯುಲಿಯಾ. ಈಕೆ ಕಂಟೆಂಟ್​ ಕ್ರಿಯೇಟರ್​. ಈಕೆ ಕರ್ನಾಟಕ ರಾಜಧಾನಿ ಹಾಗೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಾಸವಿದ್ದರು. ಭಾರತದಲ್ಲಿ 11 ವರ್ಷಗಳ ಕಾಲ ಜೀವಿಸಿದ ಬಳಿಕ ನಾನು ಅರ್ಥ ಮಾಡಿಕೊಂಡಿದ್ದಿಷ್ಟು... ಎಂಬ ಟೈಟಲ್​ ಅಡಿಯಲ್ಲಿ ಇನ್​ಸ್ಟಾಗ್ರಾಂನಲ್ಲಿ ಯುಲಿಯಾ ಹಂಚಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಯುಲಿಯಾ, ಭಾರತ ತನ್ನನ್ನು ಹೇಗೆ ಪ್ರಭಾವಿಸಿತು ಮತ್ತು ರೂಪಿಸಿತು ಎಂಬುದನ್ನು ವಿವರಿಸಿದ್ದಾರೆ.

ಯೂಲಿಯಾ ಮೊದಲ ಬಾರಿಗೆ 2012 ರಲ್ಲಿ ಭಾರತಕ್ಕೆ ಬಂದರು. ಬಂದ ಉದ್ದೇಶ ಇಂಟರ್ನ್‌ಶಿಪ್​ಗಾಗಿ. ಮೊದಲ ಐದು ತಿಂಗಳಲ್ಲೇ ಇಂಟರ್ನ್​ಶಿಪ್​ ಪೂರ್ಣಗೊಳಿಸಿ ತವರಿಗೆ ವಾಪಾಸಾದರು. ಇದಾದ ಒಂದೆರಡು ವರ್ಷಗಳ ನಂತರ, ಆಕೆ ಸರ್ಕಸ್‌ಗಾಗಿ ಆನೆಯನ್ನು ಖರೀದಿಸಲು ಭಾರತಕ್ಕೆ ಹಿಂತಿರುಗಿದರು ಮತ್ತು ದೀರ್ಘಕಾಲ ಇಲ್ಲಿಯೇ ಉಳಿದರು. ಅಂದಿನಿಂದ, ತಮ್ಮ ಕುಟುಂಬವನ್ನು ಬೆಳೆಸುವಲ್ಲಿ ಮತ್ತು ತಮ್ಮ ವ್ಯವಹಾರವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.

ಅಂದಹಾಗೆ, ರಷ್ಯಾ ಮಹಿಳೆ ಯೂಲಿಯಾ ತನ್ನ ವೈರಲ್ ವಿಡಿಯೋದಲ್ಲಿ ಭಾರತದ ಬಗ್ಗೆ ಪಟ್ಟಿ ಮಾಡಿದ ಮೂರು ವಿಷಯಗಳು ಈ ಕೆಳಕಂಡಂತಿವೆ.

* ಭಾರತದಲ್ಲಿ ಆತಿಥ್ಯವು ತುಂಬಾ ವಿಭಿನ್ನವಾಗಿದೆ. ಇಲ್ಲಿನ ಜನರು ತುಂಬಾ ಸ್ವಾಗತಾರ್ಹರು, ಮುಕ್ತ ಹೃದಯದವರು ಮತ್ತು ಸಹಾಯಕ ಮನೋಭಾವದವರು. ಎಲ್ಲಿಗಾದರೂ ಹೋಗಬೇಕಾದರೆ ಹೇಗೆ ತಲುಪುವುದು ಎಂದು ಯಾರನ್ನಾದರೂ ಕೇಳಿ, ಎಲ್ಲರೂ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲರೂ ಕೂಡ ಎಂದು ಯುಲಿಯಾ ಒತ್ತಿ ಹೇಳಿದ್ದಾರೆ.

* ಭಾರತವು ಒಂದು ಕಾಂತೀಯ ದೇಶ. ನಮ್ಮನ್ನು ಸೆಳೆದುಕೊಂಡು ಬಿಡುತ್ತದೆ. ನೀವು ಅಲ್ಲಿ ಏನನ್ನು ನೋಡಲು ಬಯಸುತ್ತೀರಿ, ಅದನ್ನು ನಂಬುವಂತೆ ಮತ್ತು ವಿಶ್ವಕ್ಕೆ ಏನನ್ನು ನೀಡಬೇಕು ಎಂಬುದನ್ನು ಭಾರತ ನಿಮಗೆ ತೋರಿಸುತ್ತದೆ. ನನ್ನ ಕೆಲವು ಸ್ನೇಹಿತರು ಭಾರತದಲ್ಲಿನ ಸವಾಲಿನ ಸನ್ನಿವೇಶಗಳೊಂದಿಗೆ ಹೋರಾಡಿದ ಮತ್ತು ನನ್ನಂತೆಯೇ ಅದ್ಭುತ ಸ್ವಾಗತವನ್ನು ಪಡೆದ ಮತ್ತು ಇಲ್ಲಿನ ಎಲ್ಲಾ ಸೌಂದರ್ಯವನ್ನು ಕಂಡ ಹಲವಾರು ಕಥೆಗಳು ನನ್ನಲ್ಲಿವೆ ಎಂದು ಯುಲಿಯಾ ತಿಳಿಸಿದ್ದಾರೆ.

* ಮುಖ್ಯವಾಗಿ ಹೇಳಬೇಕೆಂದರೆ ಭಾರತ ಅತ್ಯಂತ ಸುರಕ್ಷಿತವಾಗಿದೆ ಎಂದು ಯುಲಿಯಾ ಹೇಳಿದ್ದಾರೆ.

ಇನ್ನು ಯುಲಿಯಾ ಹಂಚಿಕೊಂಡಿರುವ ವಿಡಿಯೋ ಈವರೆಗೂ 21 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. 400ಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದು, ಸಾಕಷ್ಟು ಮಂದಿ ಕಾಮೆಂಟ್​ಗಳನ್ನು ಮಾಡಿದ್ದಾರೆ. ಅನೇಕ ನೆಟ್ಟಿಗರು ಯುಲಿಯಾ ಅವರನ್ನು ಕೊಂಡಾಡಿದ್ದಾರೆ. ವಾವ್, ಅದ್ಭುತವಾಗಿದೆ. ನಿಮ್ಮ ಪೋಸ್ಟ್ ಮತ್ತು ಭಾರತದಲ್ಲಿ ನಿಮ್ಮ 11 ವರ್ಷಗಳ ಅನುಭವ ಓದಲು ತುಂಬಾ ಸಂತೋಷವಾಯಿತು ಎಂದು ನೆಟ್ಟಿಗರೊಬ್ಬರು ಹೇಳಿದರೆ, ಇನ್ನೊಬ್ಬರು ನಾವು ಎಲ್ಲಿಗೆ ಹೋದರೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ ಮತ್ತು ಒಳ್ಳೆಯದನ್ನು ಅಳವಡಿಸಿಕೊಳ್ಳುವುದು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net