ಯಾವ ತಂಡಕ್ಕೂ ಈ ರೀತಿ ಆಗಿಲ್ಲ, ಇದು ತಪ್ಪು... ಏಷ್ಯಾ ಕಪ್​ನಲ್ಲಿ ಬಾಂಗ್ಲಾದೇಶಕ್ಕೆ ಅನ್ಯಾಯ! Asia Cup 2025

Asia Cup 2025
Published on

Asia Cup 2025 : ಗೆಲ್ಲಲೇಬೇಕಾದ ಅನಿವಾರ್ಯ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ ಪಾಕಿಸ್ತಾನ ತಂಡ ಏಷ್ಯಾ ಕಪ್ 2025ರ ಫೈನಲ್ ತಲುಪಿದೆ. ಗುರುವಾರ (ಸೆ.25) ದುಬೈನಲ್ಲಿ ನಡೆದ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಪಾಕ್​ ಪಡೆ ಸೋಲಿಸಿತು. ಫೈನಲ್​ ಪಂದ್ಯ ಭಾನುವಾರ (ಸೆ. 28) ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಟ್ರೋಫಿಗಾಗಿ ಸೆಣಸಾಡಲಿವೆ.

41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಭಾರತ ಮತ್ತು ಪಾಕಿಸ್ತಾನ ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುತ್ತಿರುವುದು ಕೂಡ ಇದೇ ಮೊದಲು. 2025ರ ಏಷ್ಯಾಕಪ್‌ನಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್​​ ಹಂತದಲ್ಲಿ ಒಮ್ಮೆ ಮತ್ತು ಸೂಪರ್-4 ಹಂತದಲ್ಲಿ ಒಮ್ಮೆ ಮುಖಾಮುಖಿಯಾಗಿದ್ದವು. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತು.

ಬಾಂಗ್ಲಾದೇಶಕ್ಕೆ ಅವಮಾನವಾಯ್ತಾ?

ಸದ್ಯ ಏಷ್ಯಾ ಕಪ್​ ಟೂರ್ನಿಯ ಫೈನಲ್​ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದರ ನಡುವೆ ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಾಂಗ್ಲಾದೇಶಕ್ಕೆ ಅನ್ಯಾಯವಾಗಿದೆ ಎಂದು ಬಾಂಗ್ಲಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕಾರಣ ಏನೆಂದರೆ, ಸೂಪರ್-4 ಹಂತದಲ್ಲಿ, ಬಾಂಗ್ಲಾದೇಶ ತಂಡವು ಎರಡು ದಿನಗಳಲ್ಲಿ ಸತತ ಎರಡು ಪಂದ್ಯಗಳನ್ನು ಆಡಿದೆ. ಬುಧವಾರ (ಸೆ.24) ಭಾರತವನ್ನು ಎದುರಿಸಿದ ನಂತರ, ಗುರುವಾರ (ಸೆ.25) ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಯಾವುದೇ ತಂಡವು ಸತತ ಎರಡು ದಿನಗಳಲ್ಲಿ ಎರಡು ಪಂದ್ಯಗಳನ್ನು ಆಡಿಲ್ಲ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕನಿಷ್ಠ ಒಂದು ದಿನದ ವಿಶ್ರಾಂತಿ ಪಡೆದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಬಾಂಗ್ಲಾದೇಶ ಅಭಿಮಾನಿಗಳು ಹೇಳುತ್ತಿದ್ದಾರೆ. ಭಾರತ ವಿರುದ್ಧದ ಪಂದ್ಯವನ್ನು ಆಡಿದ ನಂತರ ಬಾಂಗ್ಲಾದೇಶ ಆಟಗಾರರು ದೈಹಿಕವಾಗಿ ದಣಿದಿದ್ದರು ಮತ್ತು ಮರುದಿನ ಪಾಕಿಸ್ತಾನ ವಿರುದ್ಧ ಪಂದ್ಯ ನಡೆದ ಕಾರಣ ಅವರು ತಮ್ಮ ಪೂರ್ಣ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಮ್ಮ ಆಟಗಾರರಿಗೆ ಕನಿಷ್ಠ ಒಂದು ದಿನದ ವಿಶ್ರಾಂತಿ ನೀಡಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎನ್ನುತ್ತಿದ್ದಾರೆ.

ಏಷ್ಯಾ ಕಪ್​ ವೇಳಾಪಟ್ಟಿಯನ್ನು ಸಿದ್ಧಪಡಿಸುವಾಗ ಐಸಿಸಿ ಅವರು ಸ್ವಲ್ಪ ಜಾಗರೂಕರಾಗಿದ್ದರೆ, ಇದು ಸಂಭವಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಂದಹಾಗೆ, ಏಷ್ಯಾ ಕಪ್ 2025ರ ವೇಳಾಪಟ್ಟಿಯನ್ನು ಎರಡು ತಿಂಗಳ ಹಿಂದೆ ಅಂದರೆ, ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net