

Elon Musk : ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಮಗಳ ಜೀವನ ಹೇಗಿರುತ್ತದೆ ಎಂದು ಯಾರಾದರೂ ಪ್ರಶ್ನೆ ಮಾಡಿದರೆ, ತಕ್ಷಣ ನಮ್ಮ ನೆನಪಿಗೆ ಬರುವುದು ಐಷಾರಾಮಿ ಜೀವನ. ಆಕೆಗೆ ಯಾವುದೇ ಕೊರತೆ ಇರುವುದಿಲ್ಲ, ಲಕ್ಷುರಿ ವಸ್ತುಗಳು, ಐಷಾರಾಮಿ ಕಾರುಗಳು, ಗ್ಲಾಮರ್, ಆಡಂಬರ ಮತ್ತು ಪಾರ್ಟಿಗಳು ಇದೇ ಇರುತ್ತವೆ ಎನ್ನುತ್ತೇವೆ. ಆದರೆ, ವಿವಿಯನ್ ಜೆನ್ನಾ ವಿಲ್ಸನ್ ಆ ಯಾವುದೇ ಐಷಾರಾಮಿ ಸೌಕರ್ಯಗಳಿಲ್ಲದೇ ಮೂವರು ಸ್ನೇಹಿತರೊಂದಿಗೆ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ.
ಅಷ್ಟಕ್ಕೂ ಈ ವಿವಿಯನ್ ವಿಲ್ಸನ್ ಬೇರೆ ಯಾರೂ ಅಲ್ಲ, ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರ ಪುತ್ರಿ. ಇತ್ತೀಚೆಗೆ ನ್ಯೂಯಾರ್ಕ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ವಿವಿಯನ್ ವಿಲ್ಸನ್ (ಕ್ಸೇವಿಯರ್ ಮಸ್ಕ್) ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನೀವೆಲ್ಲ ಅಂದುಕೊಂಡಂತೆ ನಾನು ಐಷಾರಾಮಿ ಜೀವನ ನಡೆಸುತ್ತಿಲ್ಲ. ನನ್ನ ಬಳಿ ನೂರಾರು, ಸಾವಿರಾರು ಡಾಲರ್‌ಗಳಿಲ್ಲ. ನಾನು ಲಾಸ್ ಏಂಜಲೀಸ್‌ನಲ್ಲಿ ಮೂವರು ರೂಮ್‌ಮೇಟ್‌ಗಳೊಂದಿಗೆ ಹಂಚಿಕೊಂಡ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಮೂಲಭೂತ ಅವಶ್ಯಕತೆಗಳಾದ ಆಹಾರ, ಬಾಡಿಗೆ, ತಲೆಯ ಮೇಲೆ ಸೂರು ಮತ್ತು ಸಾಂದರ್ಭಿಕ ದುಂದುವೆಚ್ಚಗಳನ್ನು ಮಾತ್ರ ನಿಭಾಯಿಸಬಲ್ಲೆ. ಅದಕ್ಕಿಂತ ಹೆಚ್ಚಿನದ್ದನ್ನು ನನ್ನಿಂದ ಭರಿಸಲು ಸಾಧ್ಯವಿಲ್ಲ. ನನಗೆ ಜನ್ಮ ನೀಡಿದ ತಂದೆಯೊಂದಿಗೆ ನಾನು ಯಾವುದೇ ಸಂಬಂಧವನ್ನು ಹೊಂದಲು ಬಯಸುವುದಿಲ್ಲ ಎಂದು ವಿವಿಯನ್ ವಿಲ್ಸನ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಯನ್ ಅವರು ತನ್ನ ತಂದೆ-ತಾಯಿಯ ಆರ್ಥಿಕ ಸ್ಥಿತಿಯ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಸಹ ಎತ್ತಿ ತೋರಿಸಿದರು. ಆಕೆಯ ತಾಯಿ ಜಸ್ಟಿನ್ ವಿಲ್ಸನ್ ತನ್ನದೇ ಆದ ಸಂಪತ್ತನ್ನು ಹೊಂದಿದ್ದರೆ, ಆಕೆಯ ತಂದೆ ಎಲಾನ್ ಮಸ್ಕ್ ಊಹಿಸಲಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಆದರೆ, ಅವರಿಬ್ಬರ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಬಳಸಿಕೊಳ್ಳುವುದಿಲ್ಲ ಎಂದಿದ್ದಾರೆ.
ವಿವಿಯನ್ ಜೆನ್ನಾ ವಿಲ್ಸನ್, ಎಲಾನ್ ಮಸ್ಕ್ ಮತ್ತು ಅವರ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರ ಹಿರಿಯ ಮಗಳು. 2004 ರಲ್ಲಿ ಜನಿಸಿದರು. ವಿಭಿನ್ನ ಸಂಬಂಧಗಳಿಂದ ಬಂದ ಮಸ್ಕ್ ಅವರ 14 ಮಕ್ಕಳಲ್ಲಿ ವಿಲ್ಸನ್ ಹಿರಿಯಳು. ಆಕೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಮಹತ್ವಾಕಾಂಕ್ಷೆಯ ಮಾಡೆಲ್ ಆಗಿ ತನ್ನದೇ ಆದ ಗುರುತನ್ನು ಹೊಂದಿದ್ದಾರೆ. ನ್ಯಾಯಾಲಯದ ಮೂಲಕ ತನ್ನ ತಂದೆ ಕುಟುಂಬದಿಂದ ಬೇರ್ಪಟ್ಟ ಸಮಯದಲ್ಲಿ ಮಸ್ಕ್‌ನಿಂದ ನೇರ ಆರ್ಥಿಕ ಸಹಾಯವನ್ನು ವಿವಿಯನ್ ವಿಲ್ಸನ್ ನಿರಾಕರಿಸಿದಳು. ತನ್ನನ್ನು ತಾನು ಪೋಷಿಸಿಕೊಳ್ಳಲು ಮತ್ತು ಸರಳ ಜೀವನವನ್ನು ನಡೆಸಲು ಯಾರ ಸಹಾಯವೂ ಬೇಕಾಗಿಲ್ಲ ಎಂದು ಆಕೆ ಹೇಳಿದಳು. (ಏಜೆನ್ಸೀಸ್)