ತೆಂಡುಲ್ಕರ್ ಪುತ್ರ ಅರ್ಜುನ್‌ಗೆ ಈ ಬಾರಿ ಮುಂಬೈ ತಂಡದ ಬಾಗಿಲು ತೆರೆಯುವುದು ಡೌಟ್!

arjun web
Published on

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಈಗಾಗಲೆ ಮುಂಬೈನ 14, 19 ವಯೋಮಿತಿ ತಂಡಗಳಲ್ಲಿ ಆಡಿದ್ದಾರೆ. ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಮುಂಬೈ ಸೀನಿಯರ್ಸ್‌ ತಂಡವನ್ನೂ ಸೇರಲು 21 ವರ್ಷದ ಅರ್ಜುನ್ ಸಜ್ಜಾಗಿದ್ದರು. ಆದರೆ ಆಯ್ಕೆ ಟ್ರಯಲ್ಸ್‌ನಲ್ಲಿ ವಿಫಲರಾಗಿರುವುದರಿಂದ ಅವರಿಗೆ ಮುಂಬೈ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಕ್ಷೀಣವಾಗಿದೆ.

ಕಳೆದ ಐಪಿಎಲ್ 13ನೇ ಆವೃತ್ತಿಯ ವೇಳೆ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿ ಯುಎಇಗೆ ತೆರಳಿದ್ದ ಅರ್ಜುನ್ ತೆಂಡುಲ್ಕರ್, ಈ ಬಾರಿ ಮುಂಬೈ ತಂಡ ಪ್ರವೇಶಿಸುವ ನಿಟ್ಟಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಪೂರ್ವಭಾವಿಯಾಗಿ ಆಯ್ಕೆ ಟ್ರಯಲ್ಸ್ ರೂಪದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಆಯ್ಕೆ ಟ್ರಯಲ್ಸ್‌ನಲ್ಲಿರುವ 4 ತಂಡಗಳ ಪೈಕಿ ಎಡಗೈ ವೇಗಿ ಅರ್ಜುನ್ ಡಿ ತಂಡದ ಸದಸ್ಯರಾಗಿದ್ದಾರೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಅಷ್ಟೇ ವಿಕೆಟ್ ಕಬಳಿಸಿರುವ ಅವರು, 3 ಇನಿಂಗ್ಸ್‌ಗಳಲ್ಲಿ 7 ರನ್ ಮಾತ್ರ ಗಳಿಸಿದ್ದಾರೆ. ಈ ನಿರ್ವಹಣೆಯ ಆಧಾರದಲ್ಲಿ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಲಿರುವ ಮುಂಬೈ ಟಿ20 ತಂಡದಲ್ಲಿ ಸ್ಥಾನ ಪಡೆಯುವುದು ಜಟಿಲವೆನಿಸಿದೆ.

ಅರ್ಜುನ್ ತೆಂಡುಲ್ಕರ್ ಸಿ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ 4 ಓವರ್‌ಗಳ ದಾಳಿಯಲ್ಲಿ 23 ರನ್‌ಗೆ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಬಳಿ ಬಿ ತಂಡದ ವಿರುದ್ಧ 33 ರನ್ ನೀಡಿ 1 ವಿಕೆಟ್ ಮಾತ್ರ ಗಳಿಸಿದ್ದರು. ಎ ತಂಡದ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿ 1 ವಿಕೆಟ್ ಗಳಿಸಿದ್ದರು. 4ನೇ ಪಂದ್ಯದಲ್ಲಿ ಅವರು 15 ಎಸೆತಗಳಲ್ಲಿ 21 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಅಲ್ಲದೆ ವಿಕೆಟ್ ಕಬಳಿಸಲೂ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಬಿ ತಂಡದ ಪರ ಆಡಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಅರ್ಜುನ್‌ರ ಒಂದೇ ಓವರ್‌ನಲ್ಲಿ 21 ರನ್ ದೋಚಿದ್ದರು.

ಮುಂಬೈ ಕ್ರಿಕೆಟ್ ಸಂಸ್ಥೆ ಶೀಘ್ರದಲ್ಲೇ ರಾಜ್ಯ ತಂಡವನ್ನು ಪ್ರಕಟಿಸುವ ನಿರೀಕ್ಷೆ ಇದ್ದು, ಅರ್ಜುನ್‌ಗೆ ಅಚ್ಚರಿಯ ರೀತಿಯಲ್ಲಿ ಸ್ಥಾನ ಲಭಿಸುವುದೇ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. ಒಂದು ವೇಳೆ ಅರ್ಜುನ್ ಆಯ್ಕೆಯಾದರೆ, ಮೊದಲ ಬಾರಿಗೆ ಸೀನಿಯರ್ಸ್‌ ತಂಡದಲ್ಲಿ ಆಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net