

Anushka Sharma: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮತ್ತೆ ತಮ್ಮ ಬ್ಯಾಟಿಂಗ್ನಲ್ಲಿ ಲಯ ಕೊಂಡುಕೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಎಲ್ಎಸ್ಜಿ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರನೆಂಬ ದಾಖಲೆಗೆ ಪಂತ್ ಪಾತ್ರರಾಗಿದ್ದರು. ಆದರೆ, ಕಳಪೆ ಬ್ಯಾಟಿಂಗ್ನಿಂದಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ನಿನ್ನೆ (ಮೇ 27) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಸ್ಫೋಟಕ ಸೆಂಚುರಿ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಎಲ್ಎಸ್ಜಿ ಪರ ರಿಷಭ್ ಪಂತ್ ಅಬ್ಬರಿಸಿ ಬೊಬ್ಬಿರಿದರು. ಕೇವಲ 61 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಿಂದ 118 ರನ್ ಕಲೆಹಾಕಿದರು. ಬರೋಬ್ಬರಿ 193.44ರ ಸ್ಟ್ರೈಕ್ರೇಟ್ನಲ್ಲಿ ಪಂತ್ ಬ್ಯಾಟ್ ಬೀಸಿದರು. ಟೂರ್ನಿಯ ಆರಂಭದಿಂದಲೂ ನೀರಸ ಪ್ರದರ್ಶನ ತೋರಿದ್ದ ಪಂತ್ ಕೊನೆಯ ಲೀಗ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದರು. ಈ ವೇಳೆ ಅವರು ಸಂಭ್ರಮಿಸಿದ ರೀತಿ ಎಲ್ಲರ ಗಮನ ಸೆಳೆಯಿತು.
ಶತಕ ಬಾರಿಸಿದ ಬೆನ್ನಲ್ಲೇ ಹೆಲ್ಮೆಟ್ ಮತ್ತು ಕೈಗಳಿಂದ ಗ್ಲೌಸ್ ತೆಗೆದಿಟ್ಟು ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದನ್ನು ನೋಡಿದ ಲಖನೌ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಎದ್ದು ನಿಂತು, ಚಪ್ಪಾಳೆ ತಟ್ಟಿ ಸಂಭ್ರಮಾಚರಣೆ ಮಾಡಿದರು. ಆದರೆ, ಈ ಸಂಭ್ರಮಾಚರಣೆ ಅನುಷ್ಕಾ ಶರ್ಮಾಗೆ ಖುಷಿ ಕೊಡಲಿಲ್ಲ. ಏಕೆಂದರೆ, ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸುತ್ತಾ, ಆರ್ಸಿಬಿ ಬೌಲರ್ಗಳಿಗೆ ಪಂತ್ ಬೆವರಿಳಿಸಿದ್ದನ್ನು ನೋಡಿ ಅನುಷ್ಕಾ ಶರ್ಮಾ ಬೇಸರಗೊಂಡಿದ್ದರು. ಹೀಗಾಗಿ ಪಂತ್ ಶತಕ ಅವರಿಗೆ ಖುಷಿ ಕೊಡಲಿಲ್ಲ. ಅನಷ್ಕಾ ಶರ್ಮಾರ ಬೇಸರ ಅವರ ಮುಖದಲ್ಲಿ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಾಯಕ ರಿಷಭ್ ಪಂತ್ (ಅಜೇಯ 118 ರನ್, 61 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕ, ಮಿಚೆಲ್ ಮಾರ್ಷ್ (67 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 227 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಆರ್ಸಿಬಿ ಬೌಲರ್ಗಳಲ್ಲಿ ನುವಾನ್ ತುಷಾರ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನತ್ತಿದ ಆರ್ಸಿಬಿ, ಜಿತೇಶ್ ಶರ್ಮಾ (ಅಜೇಯ 85 ರನ್, 33 ಎಸೆತ 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ (54 ರನ್, 30 ಎಸೆತ, 10 ಬೌಂಡರಿ) ಮತ್ತು ಮಾಯಾಂಕ್ ಅಗರ್ವಾಲ್ (ಅಜೇಯ 41 ರನ್, 23 ಎಸೆತಗಳಲ್ಲಿ 5 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ 18.4 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ ಗುರಿ ತಲುಪಿತು. ಲಖನೌ ಬೌಲರ್ಗಳಲ್ಲಿ ವಿಲಿಯಂ ಒ ರೂರ್ಕ್ ಎರಡು ವಿಕೆಟ್ ಪಡೆದರೆ, ಆಕಾಶ್ ಮಹಾರಾಜ್ ಸಿಂಗ್ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿದೆ. ಕ್ವಾಲಿಫೈಯರ್-1 ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೇ 29 ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್)