

Virat Kohli : ಈ ಬಾರಿಯ ಐಪಿಎಲ್ ಸೀಸನ್ ನೋಡುತ್ತಿರುವವರಿಗೆ ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ರಾಥಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತನ್ನ ಬೌಲಿಂಗ್ ಪ್ರದರ್ಶನಕ್ಕಿಂತ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ವಿಕೆಟ್ ಕಿತ್ತ ಬಳಿಕ ತನ್ನ ವಿಚಿತ್ರ ನೋಟ್ಬುಕ್ ಆಚರಣೆಯಿಂದಲೇ ರಾಥಿ ಪ್ರಸಿದ್ಧಿ ಪಡೆದಿದ್ದಾರೆ. ಆದರೆ, ಇದೇ ಸಂಭ್ರಮಾಚರಣೆ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿ ದಂಡವನ್ನೂ ಕಟ್ಟಿದ್ದಾರೆ. ಸಾಲದು ಎಂಬಂತೆ ಒಂದು ಪಂದ್ಯದಿಂದ ಅಮಾನತು ಸಹ ಆಗಿದ್ದರು. ತಾನು ಆಡುತ್ತಿರುವ ಚೊಚ್ಚಲ ಐಪಿಎಲ್ ಟೂರ್ನಿಯಲ್ಲೇ ದಿಗ್ವೇಶ್ ರಾಥಿ ವಿವಾದಿತ ಆಟಗಾರನೆಂಬ ಕುಖ್ಯಾತಿ ಗಳಿಸಿದ್ದಾರೆ. ರಾಥಿ ಅವರ ಈ ಅತಿರೇಕದ ವರ್ತನೆ ನಿನ್ನೆ (ಮೇ 27) ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರಿಗೂ ಕೋಪ ತರಿಸಿದೆ. ಅಷ್ಟಕ್ಕೂ ಏನಾಯಿತು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ನಿನ್ನೆ ಉತ್ತರ ಪ್ರದೇಶದ ಲಖನೌ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವೆ ಈ ಸೀಸನ್ನ ಕೊನೆಯ ಲೀಗ್ ಪಂದ್ಯ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ವಿರೋಚಿತ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನಗಿಟ್ಟಿಸಿದೆ. ಈ ಪಂದ್ಯದ ನಡುವೆ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಸ್ಫೋಟಕ ಬ್ಯಾಟಿಂಗ್ನಿಂದ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದ ಆರ್‌ಸಿಬಿ ಬ್ಯಾಟರ್ ಹಾಗೂ ನಾಯಕ ಜಿತೇಶ್ ಶರ್ಮಾರನ್ನು ಮಂಕಡ್ ಮೂಲಕ ಔಟ್ ಮಾಡಲು ದಿಗ್ವೇಶ್ ರಾಥಿ ಯತ್ನಿಸಿದರು. ಇದೇ ಸಂಗತಿ ವಿರಾಟ್ ಕೊಹ್ಲಿ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಜಿತೇಶ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ನಡುವೆ ಉತ್ತಮ ಜತೆಯಾಟದೊಂದಿಗೆ ಮುನ್ನಡೆದ ಆರ್‌ಸಿಬಿ, 228 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟುವಾಗ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿರುವಂತೆ ಕಂಡುಬಂದಂತಹ ಸಮಯದಲ್ಲಿ ಎಲ್‌ಎಸ್‌ಜಿಯ ದಿಗ್ವೇಶ್ ರಾಥಿ ಮಂಕಡ್ ಮೂಲಕ ಜಿತೇಶ್ರನ್ನು ಔಟ್ ಮಾಡಲು ಪ್ರಯತ್ನಿಸಿದರು. ಈ ತೀರ್ಪನ್ನು ಮೂರನೇ ಅಂಪೈರ್‌ಗೆ ಕಳುಹಿಸಲಾಯಿತು. ಬಳಿಕ ಅದನ್ನು ಪರಿಶೀಲಿಸಿದ ಥರ್ಡ್ ಅಂಪೈರ್, ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಬೌಲರ್ ತನ್ನ ಆಕ್ಷನ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದು ತೀರ್ಪು ನೀಡಿ, ನಾಟ್ಔಟ್ ಎಂದು ಘೋಷಿಸಿದರು.
ಈ ನಾಟಕೀಯ ಪ್ರಸಂಗ ನಡೆದಿದ್ದು 17 ನೇ ಓವರ್‌ನಲ್ಲಿ. ಜಿತೇಶ್ ಅವರು ದಿಗ್ವೇಶ್ ಎಸೆದ ಮೊದಲ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಈ ವೇಳೆ ಪಾಯಿಂಟ್‌ನಲ್ಲಿ ನಿಂತಿದ್ದ ಆಯುಷ್ ಬಡೋನಿ ಕ್ಯಾಚ್ ಹಿಡಿದರು. ಇದರಿಂದ ಜಿತೇಶ್, ನಿರಾಶೆಗೊಂಡು, ಮಂಡಿಯೂರಿ ನೆಲದಲ್ಲಿ ಕುಳಿತರು. ಈ ವೇಳೆ ದಿಗ್ವೇಶ್ರಾಥಿ ಎಂದಿನಂತೆ ತಮ್ಮ ವಿಶಿಷ್ಟ ನೋಟ್ಬುಕ್ ಶೈಲಿಯಲ್ಲಿ ಆಚರಿಸಲು ಪ್ರಾರಂಭಿಸಿದರು. ಆದರೆ, ದೇವರ ಆಟ ಬೇರೆಯೇ ಇತ್ತು. ಅದೇನೆಂದರೆ, ಅಂಪೈರ್ ಆ ಚೆಂಡನ್ನು ನೋ-ಬಾಲ್ ಎಂದು ಹೇಳಿದರು. ಥರ್ಡ್ ಅಂಪೈರ್ ಪರಿಶೀಲಿಸಿದಾಗ ಅದು ಬ್ಯಾಕ್‌ಫೂಟ್ ನೋ-ಬಾಲ್ ಎಂಬುದು ಬಹಿರಂಗವಾಯಿತು. ಇದು ಜಿತೇಶ್‌ಗೆ ಒಂದು ದೊಡ್ಡ ಜೀವದಾನ ಸಿಕ್ಕಿತು.
ನಂತರ ಅದೇ ಓವರ್‌ನಲ್ಲಿ, ಐದನೇ ಎಸೆತದಲ್ಲಿ, ದಿಗ್ವೇಶ್ ರಾಥಿ ಅವರು ಕ್ರೀಸ್‌ನಿಂದ ಬೇಗನೆ ಹೊರಬಂದ ಜಿತೇಶ್ ಶರ್ಮಾ ಅವರನ್ನು ಔಟ್ ಮಾಡಲು ನಾನ್-ಸ್ಟ್ರೈಕರ್ನಲ್ಲಿ ಮಂಕಡ್ ಪ್ರಯತ್ನಿಸಿದರು. ಅಪೀಲ್ ಕೂಡ ಮಾಡಿದರು. ಈ ವೇಳೆ ಅಂಪೈರ್ ಮತ್ತೊಮ್ಮೆ ನಿರ್ಧಾರವನ್ನು ಮೂರನೇ ಅಂಪೈರ್‌ಗೆ ಉಲ್ಲೇಖಿಸಿದರು. ಆದರೆ, ರನೌಟ್ ಪ್ರಯತ್ನಕ್ಕೂ ಮೊದಲು ದಿಗ್ವೇಶ್ ರಾಥಿ ಬಾಲ್ ಬಿಡುಗಡೆ ಪಾಯಿಂಟ್ ದಾಟಿದ ಕಾರಣ ನಾಟ್ ಔಟ್ ಎಂದು ತೀರ್ಪು ನೀಡಿದರು. ಇದಕ್ಕೆ ಪೂರಕವಾಗಿ, ಮೂರನೇ ಅಂಪೈರ್ ತೀರ್ಪು ಪರಿಶೀಲಿಸುತ್ತಿರುವಾಗ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಕೂಡ ಮೇಲ್ಮನವಿಯನ್ನು ಹಿಂತೆಗೆದುಕೊಂಡರು. ಈ ವೇಳೆ ಜಿತೇಶ್ ಅವರು ಪಂತ್ ಅವರನ್ನು ಅಪ್ಪಿಕೊಂಡು ಕೃತಜ್ಞತೆ ಸಹ ಸಲ್ಲಿಸಿದರು. ಈ ಕ್ಷಣ ಕ್ರೀಡಾಸ್ಫೂರ್ತಿಗೆ ಉದಾಹರಣೆಯಾಯಿತು.
ಮೈದಾನದಲ್ಲಿ ನಡೆದ ಮಂಕಡ್ ನಾಟಕವು ವಿರಾಟ್ ಕೊಹ್ಲಿಯನ್ನು ನಿರಾಶೆಗೊಳಿಸಿತು. ಈ ವೇಳೆ ಡ್ರೆಸ್ಸಿಂಗ್ ಕೋಣೆಯಲ್ಲಿದ್ದ ವಿರಾಟ್ ಕೊಹ್ಲಿ ಕೋಪದಿಂದ ವಾಚ್ ಬಾಟಲ್ ಅನ್ನು ಒಡೆದು ಹಾಕುತ್ತಿರುವುದು ಕಂಡುಬಂದಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದ್ದು, ಅಭಿಮಾನಿಗಳು ದಿಗ್ವೇಶ್ ರಾಥಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಅಪೀಲ್ ಹಿಂತೆಗೆದುಕೊಂಡ ನಾಯಕ ರಿಷಭ್ ಪಂತ್ ನಡೆಯನ್ನೂ ಮೆಚ್ಚಿಕೊಂಡಿದ್ದಾರೆ. ಇಷ್ಟೆಲ್ಲ ಡ್ರಾಮಾ ಮಾಡಿದರೂ ಕೂಡ ಆರ್‌ಸಿಬಿ ಗೆಲುವನ್ನು ಮಾತ್ರ ಯಾರಿಂದಲೂ ತಡೆಯಲಾಗಲಿಲ್ಲ.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ನಾಯಕ ರಿಷಭ್ ಪಂತ್ (ಅಜೇಯ 118 ರನ್, 61 ಎಸೆತ, 11 ಬೌಂಡರಿ, 8 ಸಿಕ್ಸರ್) ಭರ್ಜರಿ ಶತಕ, ಮಿಚೆಲ್ ಮಾರ್ಷ್ (67 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 227 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ನುವಾನ್ ತುಷಾರ, ಭುವನೇಶ್ವರ್ ಕುಮಾರ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ, ಜಿತೇಶ್ ಶರ್ಮಾ (ಅಜೇಯ 85 ರನ್, 33 ಎಸೆತ 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ (54 ರನ್, 30 ಎಸೆತ, 10 ಬೌಂಡರಿ) ಮತ್ತು ಮಾಯಾಂಕ್ ಅಗರ್ವಾಲ್ (ಅಜೇಯ 41 ರನ್, 23 ಎಸೆತಗಳಲ್ಲಿ 5 ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಲಖನೌ ಬೌಲರ್‌ಗಳಲ್ಲಿ ವಿಲಿಯಂ ಒ ರೂರ್ಕ್ ಎರಡು ವಿಕೆಟ್ ಪಡೆದರೆ, ಆಕಾಶ್ ಮಹಾರಾಜ್ ಸಿಂಗ್ ಮತ್ತು ಆವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿದೆ. ಕ್ವಾಲಿಫೈಯರ್-1 ರಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೇ 29 ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಟೇಬಲ್-ಟಾಪರ್ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್)