ಏಷ್ಯನ್​ ಗೇಮ್ಸ್​ಗೆ ವೀಸಾ ನಿರಾಕರಣೆ; ಚೀನಾ ಪ್ರವಾಸ ರದ್ದು ಮಾಡಿದ ಅನುರಾಗ್​ ಠಾಕೂರ್​

Anurag Thakur
Published on

ನವದೆಹಲಿ: 19ನೇ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ವುಶು ಅಥ್ಲೀಟ್​ಗಳಿಗೆ ಚೀನಾ ಸರ್ಕಾರ ವೀಸಾ ನಿರಾಕರಿಸಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಏಷ್ಯನ್​ ಗೇಮ್ಸ್​ ಉದ್ಘಾಟನೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಬೇಕಿದ್ದ ಅನುರಾಗ್​ ಠಾಕೂರ್​ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ವಿದೇಶಾಂಗ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಕಿರಣ್​ ರಿಜುಜು, ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸ ಬೇಕಾಗಿದ್ದ ಅರುಣಾಚಲಪ್ರದೇಶದ ವುಶು ಅಥ್ಲೀಟ್​ಗಳಿಗೆ ವೀಸಾ ನಿರಾಕರಿಸಿರುವ ಚೀನಾ ಸರ್ಕಾರದ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ.

ಚೀನಾದ ನಡವಳಿಕೆ ಏಷ್ಯನ್​ ಗೇಮ್ಸ್​ ನಿಯಮ ಹಾಗೂ ಕ್ರೀಡಾ ಮನೋಭಾವ ಉಲ್ಲಂಘಿಸಿದಂತಾಗುತ್ತದೆ. ಈ ಕ್ರಮವು ಚೀನಾದ ತಾರತಮ್ಯ ಧೋರಣೆಯನ್ನು ಪ್ರದರ್ಶಿಸುತ್ತದೆ. ಅರುಣಾಚಲಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾದ ಕ್ರಮಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಚೀನಾದ ಈ ಕಾನೂನುಬಾಹಿರ ಕ್ರಮದ ವಿರುದ್ಧ ಅಂತರಾಷ್ಟ್ರೀಯ ಒಲಂಪಿಕ್​ ಸಮಿತಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net