

ಅಹಮದಾಬಾದ್: ಭಾರತ ಪರ 200ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಅನುಭವಿ ಅಜಿತ್ ಅಗರ್ಕರ್ ಆಯ್ಕೆಗಾರರಾಗುವ ನಿಟ್ಟಿನಲ್ಲಿ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಗುರುವಾರ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅಗರ್ಕರ್‌ಗಿಂತ ಕಡಿಮೆ ಅನುಭವಿಯಾದ ಮುಂಬೈನ ಮತ್ತೋರ್ವ ಮಾಜಿ ವೇಗಿ ಅಬೆ ಕುರುವಿಲ್ಲಾ ಪಶ್ಚಿಮ ವಲಯದಿಂದ ಹೊಸ ಆಯ್ಕೆಗಾರರಾಗಿ ಆಯ್ಕೆಯಾದರು.
ಅಗರ್ಕರ್‌ಗೆ ತವರಿನ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಬೆಂಬಲ ಇಲ್ಲದಿದ್ದುದೇ ಈ ಅಚ್ಚರಿಯ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಇದಲ್ಲದೆ, ಅಗರ್ಕರ್ ಮುಂಬೈನಲ್ಲಿ ಮುಖ್ಯ ಆಯ್ಕೆಗಾರರಾಗಿದ್ದ ಸಮಯದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಹಾಜರಾಗುತ್ತಿರಲಿಲ್ಲ ಎಂಬ ಆರೋಪವೂ ಇತ್ತು. ಇನ್ನು ಎಂಸಿಎ, ಅಬೆ ಕುರುವಿಲ್ಲಾ ಪರವಾಗಿಯೂ ನಿಂತಿತ್ತು. ಹೀಗಾಗಿ 10 ಟೆಸ್ಟ್, 25 ಏಕದಿನ ಪಂದ್ಯಗಳನ್ನಷ್ಟೇ ಆಡಿರುವ ಕುರುವಿಲ್ಲಾ ಆಯ್ಕೆಗಾರರಾಗಿ ಆಯ್ಕೆಯಾದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
26 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಗರ್ಕರ್ ಆಯ್ಕೆಗಾರರಾಗಿ ಆಯ್ಕೆಯಾಗಿದ್ದರೆ, ಸಮಿತಿಯ ಅಧ್ಯಕ್ಷರೂ ಆಗಿರುತ್ತಿದ್ದರು. ಯಾಕೆಂದರೆ ಹೊಸ ಅಧ್ಯಕ್ಷ ಚೇತನ್ ಶರ್ಮ (23) ಅಗರ್ಕರ್‌ಗಿಂತ ಕಡಿಮೆ ಟೆಸ್ಟ್ ಆಡಿದ್ದಾರೆ.