

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ಗೆ ಭಾರತ ತಂಡದ ಕಿಟ್ ಪ್ರಾಯೋಜಕತ್ವದಿಂದ ಚೀನಾದ ಲೀ ನಿಂಗ್ ಕಂಪನಿಯನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಹೊರಗಿಟ್ಟಿದೆ. ಇದೀಗ ಇದೇ ತಿಂಗಳೊಳಗೆ ನೂತನ ಪ್ರಾಯೋಜಕರು ಸಿಗಬೇಕಿದೆ. ಇಲ್ಲವಾದರೆ ಜುಲೈ 23 ರಿಂದ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಬ್ರಾಂಡೆಡ್ ಅಲ್ಲದ ಜೆರ್ಸಿಗಳನ್ನು ತೊಡಬೇಕಿದೆ. ನಿಗದಿತ ವೇಳೆಯಲ್ಲಿ ನೂತನ ಕಿಟ್ ಪ್ರಾಯೋಜಕರನ್ನು ಹುಡುಕುವುದಾಗಿ ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದ್ದಾರೆ. ನೂತನ ಪ್ರಾಯೋಜಕರಿಗಾಗಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಪ್ರಾಯೋಜಕತ್ವಕ್ಕಾಗಿ ಯಾರನ್ನು ಒತ್ತಾಯಿಸುವುದಿಲ್ಲ. ಸ್ವಇಚ್ಚೆಯಿಂದ ಬಂದವರಿಗೆ ಸ್ವಾಗತ ಎಂದು ಬಾತ್ರಾ ಹೇಳಿದ್ದಾರೆ. ಈ ತಿಂಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಇಲ್ಲವಾದರೆ ಬ್ರಾಂಡೆಡ್ ಅಲ್ಲದ ಜೆರ್ಸಿಗಳನ್ನು ನೀಡುವುದಾಗಿ ಹೇಳಿದ್ದಾರೆ.
ಕಳೆದ ವಾರವಷ್ಟೇ ಐಎಒ, ಒಲಿಂಪಿಕ್ ಕ್ರೀಡಾಕೂಟಕ್ಕೆ ಚೀನಾ ಸಂಸ್ಥೆ ಲೀ ನಿಂಗ್ ಪ್ರಾಯೋಜಕತ್ವ ಭಾರತ ತಂಡದ ಕಿಟ್ ಬಿಡುಗಡೆ ಮಾಡಿತ್ತು.ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಐಒಎ ಚೀನಾ ಕಂಪನಿಯ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. ಚೀನಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಐಒಎ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳು ಸೇರಿದಂತೆ ಎಲ್ಲ ಕಡೆಯಿಂದಲೂ ಚೀನಾ ಕಂಪನಿ ಪ್ರಾಯೋಜಕತ್ವಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಾತ್ರಾ ವಿವರಿಸಿದರು.
ಕೋವಿಡ್ ಕಾರಣದಿಂದಾಗಿ ಭಾರತ ಸೇರಿದಂತೆ 9 ದೇಶಗಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಯೋಜಕರು ನಿರ್ಬಂಧ ವಿಧಿಸಲಿದ್ದಾರೆ ಎಂಬ ವರದಿಯನ್ನು ಬಾತ್ರಾ ತಳ್ಳಿ ಹಾಕಿದರು. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಇದೆಲ್ಲವೂ ಗಾಳೆ ಸುದ್ದಿ, ಒಲಿಂಪಿಕ್ಸ್ನಲ್ಲಿ ಭಾರತ ತಂಡ ಸ್ಪರ್ಧಿಸಲಿದೆ ಎಂದು ಬಾತ್ರಾ ಸ್ಪಷ್ಟಪಡಿಸಿದರು. ಭಾರತ ಸೇರಿದಂತೆ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ, ಅ್ಘಾನಿಸ್ತಾನ, ವಿಯೆಟ್ನಾಂ, ಹಾಗೂ ಬ್ರಿಟನ್ ತಂಡಗಳನ್ನು ಒಲಿಂಪಿಕ್ಸ್ನಿಂದ ನಿರ್ಬಂಧ ಹೇರಲಾಗಿದೆ ಎಂದು ಮಲೇಷ್ಯಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೆ, ಕ್ರೀಡಾಕೂಟದ ಆಯೋಜಕರು ಕೂಡ ಈ ವರದಿಯನ್ನು ತಳ್ಳಿಹಾಕಿದ್ದಾರೆ.