

ಅಬುದಾಬಿ: ಸದಾ ಈ ಸಲ ಕಪ್ ನಮ್ಮದೇ ಎಂದು ಕನವರಿಸುವ ಆರ್ಸಿಬಿ ಅಭಿಮಾನಿಗಳಿಗೆ ಆರ್ಸಿಬಿ ತಂಡ ಈ ಸಲವೂ ನಿರಾಸೆ ಉಂಟುಮಾಡಿದೆ. ಆದರೆ ಪ್ರತಿ ಸಲದಂತೆ ಈ ಸಲವೂ ಕೂಡ ಅಭಿಮಾನಿಗಳ ಮನ ಗೆಲ್ಲುವಲ್ಲಿ ತಂಡ ಯಶಸ್ವಿಯಾಗಿದೆ. ಈ ಬಾರಿ ಆರ್ಸಿಬಿ ಪ್ಲೇ ಆಫ್ ತಲುಪುವುದಕ್ಕೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡಿದ, ಅಭಿಮಾನಿಗಳಿಗೆ ಅಚ್ಚು ಮೆಚ್ಚಾದ ಎಬಿ ಡಿ ವಿಲಿಯರ್ಸ್ ಇದೀಗ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಮುಂದಿನ ವರ್ಷ ತಂಡವನ್ನು ಇನ್ನಷ್ಟು ಬಲಿಷ್ಠ ಮಾಡಿಕೊಂಡು, ಕಪ್ ಗೆಲ್ಲುವುದಾಗಿ ಭರವಸೆ ಕೊಟ್ಟಿದ್ದಾರೆ.
ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ಆರ್ಸಿಬಿ ಸೋಲುಂಡಿದೆ. ಆಟ ಮುಗಿಸಿ ಡ್ರೆಸ್ಸಿಂಗ್ ರೂಂ ಸೇರಿದ ಆರ್ಸಿಬಿ ತಂಡ, ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಮಾಡಿದೆ. ನಾವು ಕಷ್ಟ ಪಟ್ಟು ಪ್ಲೇ ಆಫ್ ತಲುಪಿದ್ದೇವೆ. ಕೆಲವು ಸಣ್ಣ ಪುಟ್ಟ ತಪ್ಪುಗಳ ಕಾರಣ ಗೆಲುವಿನಿಂದ ದೂರ ಉಳಿಯುವಂತಾಗಿದೆ. ಆದರೆ ಕಳೆದ ವರ್ಷದ ಹಾದಿ ತಪ್ಪಿದ್ದ ತಂಡ ಈ ವರ್ಷ ಸಾಕಷ್ಟು ಸುಧಾರಿಸಿಕೊಂಡು ಬಂದಿದ್ದೇವೆ. ಮುಂದಿನ ವರ್ಷಕ್ಕೆ ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡೋಣ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ತಂಡದ ಸದಸ್ಯರಿಗೆ ಹುರಿದುಂಬಿಸಿದ್ದಾರೆ.
ವಿಡಿಯೋದಲ್ಲಿ ತಂಡದ ಪ್ರತಿಯೊಬ್ಬ ಸದಸ್ಯರೂ ಮಾತನಾಡಿದ್ದಾರೆ. ಯಾರೊಬ್ಬರೂ ಋಣಾತ್ಮಕವಾಗಿ ಮಾತನಾಡದೆ, ಧನಾತ್ಮಕವಾಗಿಯೇ ಮಾತನಾಡಿದ್ದು, ಮುಂದಿನ ವರ್ಷ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಆರ್ಸಿಬಿ ಸ್ಟಾರ್ ಎನಿಸಿಕೊಂಡಿರುವ ಎಬಿಡಿ, ಆರ್ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ವಿಡಿಯೋವನ್ನು ಆರ್ಸಿಬಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. (ಏಜೆನ್ಸೀಸ್)