

Aakash Chopra: ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ದುಬೈಗೆ ತೆರಳಿರುವ ಭಾರತ ತಂಡ, ಆತಿಥೇಯ ಪಾಕಿಸ್ತಾನ ವಿರುದ್ಧದ ಪಂದ್ಯವನ್ನಾಡಲು ಸನ್ನದ್ಧವಾಗಿದೆ. ಟೀಮ್ ಇಂಡಿಯಾ ಬಲಿಷ್ಠವಾಗಿ ಕಂಡಿದ್ದೇ ಆದರೂ ತಂಡದಿಂದ ಮೊಹಮ್ಮದ್ ಸಿರಾಜ್ರನ್ನು ಕೈಬಿಟ್ಟಿದ್ದು, ಅನೇಕರ ಬೇಸರಕ್ಕೆ ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ, ಒಂದಷ್ಟು ವಿಷಯಗಳನ್ನು ಕ್ರಿಕೆಟ್ ಪ್ರಿಯರ ಮುಂದೆ ಹಂಚಿಕೊಂಡಿದ್ದಾರೆ.
"2025ರ ಚಾಂಪಿಯನ್ಸ್ ಟ್ರೋಫಿಯಿಂದ ಮೊಹಮ್ಮದ್ ಸಿರಾಜ್ರನ್ನು ಹೊರಗಿಟ್ಟ ಕೂಡಲೇ ಅವರೇನು ಕಳಪೆ ಪ್ರದರ್ಶನ ತೋರಿದ ಆಟಗಾರ ಎಂದಲ್ಲ. ಇದು ವೇಗಿಯ ಭವಿಷ್ಯವನ್ನೂ ನಿರ್ಧರಿಸುವುದಿಲ್ಲ. ತಮ್ಮ ವೃತ್ತಿಜೀವನದಲ್ಲಿ ಈಗಾಗಲೇ ಹಲವಾರು ಸವಾಲಿನ ಹಂತಗಳನ್ನು ಜಯಿಸಿರುವ ಸಿರಾಜ್, ತಮ್ಮನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಟ್ಟರು ಎಂಬ ವಿಷಯಕ್ಕೆ ಎದೆಗುಂದುವುದಿಲ್ಲ" ಎಂದು ಚೋಪ್ರಾ ಹೇಳಿದರು.
15 ಸದಸ್ಯರನ್ನು ಒಳಗೊಂಡ ಭಾರತ ತಂಡದಲ್ಲಿ ಮೂವರು ಬೌಲಿಂಗ್ ಸ್ಪೆಷಲಿಸ್ಟ್ಗಳು ಕಣಕ್ಕಿಳಿಯಲಿದ್ದಾರೆ. ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದ ಮೂವರು ವೇಗಿಗಳು. ಸಿರಾಜ್ ಸ್ಥಾನಕ್ಕೆ ರಾಣಾ ಆಗಮಿಸಿರುವುದು ಕೆಲವರಿಗೆ ಖುಷಿ ತಂದರೆ, ಇನ್ನೂ ಕೆಲವರಿಗೆ ಬೇಸರ ಮೂಡಿಸಿದೆ. ಸದ್ಯ ಇದೇ ವಿಷಯವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಚರ್ಚಿಸಿದ ಆಕಾಶ್, ಒಂದೇ ಒಂದು ಟೂರ್ನಿ ಫಲಿತಾಂಶ ಸಿರಾಜ್ ಏನು ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ರಸ್ತೆ ಸಂಚಾರ ಗಣತಿ 17ರಿಂದ
"ಸಿರಾಜ್ ಒಬ್ಬ ಅತ್ಯುತ್ತಮ ಆಟಗಾರ. ಬಹಳ ವರ್ಷಗಳ ಸಮಯ ತಂಡದ ಪರ ಅದ್ಭುತ ಪ್ರದರ್ಶನ ನೀಡಿದವರು. ಅವರ ಪರಿಸ್ಥಿತಿಯನ್ನು ಹಲವು ಆಯಾಮಗಳಲ್ಲಿ ನೋಡಿ ನಿರ್ಣಯಿಸುವುದು ಉತ್ತಮ. ಅವರ ಫಾರ್ಮ್ ಕಳಪೆಯಾಗಿಲ್ಲ. ಉತ್ತಮ ಅಲ್ಲದೇ ಇರಬಹುದು. ಆದ್ರೆ, ಖಂಡಿತ ಕಳಪೆ ಅಲ್ಲ. ಕ್ರಿಕೆಟ್ಗಾಗಿ ಭಾರೀ ಶ್ರಮಿಸಿದ್ದಾರೆ. ತನ್ನ ತಂದೆ ವಿಧಿವಶರಾದರೂ ಅವರ ಕಾರ್ಯಕ್ಕೆ ಮುಂದಾಗದ ಸಿರಾಜ್, 2020-21ರ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಬಯಸಿದರು. ಅದು ಅವರ ತಂದೆಯ ಆಶಯವೂ ಆಗಿತ್ತು. ಆಟವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವ ಆಟಗಾರ ಆತನಲ್ಲ" ಎಂದರು.
"ಇದಕ್ಕೂ ಮೀರಿ ಹೇಳುವುದಾದರೆ, ಶಮಿ, ಹರ್ಷಿತ್ ಮತ್ತು ಅರ್ಷದೀಪ್ ಅವರಂತಹ ಆಟಗಾರರನ್ನು ಬದಲಾಯಿಸುವ ಬಹುಮುಖ ಪ್ರತಿಭೆ ಸಿರಾಜ್. ಅವರು ತಂಡದಲ್ಲಿ ವಿವಿಧ ಪಾತ್ರಗಳಿಗೆ ಹೊಂದಿಕೊಳ್ಳಬಲ್ಲರು. ಆ ಸಾಮರ್ಥ್ಯ ಅವರಿಗಿದೆ. ಸಿರಾಜ್ರನ್ನು ಹೊರತುಪಡಿಸಿದರೆ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಅವರಂತಹ ಇತರ ಪ್ರತಿಭಾನ್ವಿತ ಆಟಗಾರರೂ ನಮ್ಮಲ್ಲಿದ್ದಾರೆ. ಸಿರಾಜ್ಗೆ ಉಜ್ವಲ ಭವಿಷ್ಯವಿದೆ ಎಂದು ನಾನು ದೃಢವಾಗಿ ನಂಬುತ್ತೇನೆ" ಎಂದು ಚೋಪ್ರಾ ಹೇಳಿದ್ದಾರೆ,(ಏಜೆನ್ಸೀಸ್).