ಹಾವು ಕಚ್ಚಿದ್ದಕ್ಕೆ ಮದ್ದು ಇದೆ, ತಪ್ಪು ಗ್ರಹಿಕೆಗೆ ಇಲ್ಲ ಎಂದು ಅಫ್ರಿದಿಗೆ ಚಾಟಿ ಬೀಸಿದ ಆಕಾಶ್​ ಚೋಪ್ರಾ!

afridi akash
Published on

ನವದೆಹಲಿ: ಪಾಕಿಸ್ತಾನ ತಂಡ ಈ ಹಿಂದೆ ನಿರಂತರವಾಗಿ ಭಾರತ ತಂಡವನ್ನು ಸೋಲಿಸಿತ್ತು. ಆಗ ಭಾರತ ತಂಡದ ಆಟಗಾರರು ಪಂದ್ಯದ ಬಳಿಕ ಬಂದು ನಮ್ಮ ಕ್ಷಮೆಯಾಚಿಸುತ್ತಿದ್ದರು ಎಂದು ಇತ್ತೀಚೆಗೆ ನಾಲಿಗೆ ಹರಿಬಿಟ್ಟಿದ್ದ ಮಾಜಿ ಆಲ್ರೌಂಡರ್ ಶಾಹಿದ್​ ಅಫ್ರಿದಿಗೆ ಭಾರತ ತಂಡದ ಮಾಜಿ ಬ್ಯಾಟ್ಸ್​ಮನ್​ ಹಾಗೂ ವೀಕ್ಷಕವಿವರಣೆಕಾರ ಆಕಾಶ್​ ಚೋಪ್ರಾ ಮಾತಿನ ಚಾಟಿ ಬೀಸಿದ್ದಾರೆ. ತನ್ನ ವಯಸ್ಸಿನ ಬಗ್ಗೆಯೇ ಸುಳ್ಳು ಹೇಳಿದ್ದ ಅಫ್ರಿದಿ, ಭಾರತೀಯರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಆಕಾಶ್​ ಚೋಪ್ರಾ ಸರಿಯಾಗಿಯೇ ಬೆಂಡೆತ್ತಿದ್ದಾರೆ.

'ಪಾಕಿಸ್ತಾನ ತಂಡ ಒಂದು ಕಾಲದಲ್ಲಿ ಭಾರತಕ್ಕಿಂತ ಉತ್ತಮವಾಗಿಯೇ ಇತ್ತು ಎಂಬುದು ನಿಜ. ಶಾರ್ಜಾದಲ್ಲಿ ಭಾರತ ತಂಡ ಆಡುತ್ತಿದ್ದಾಗ ಪಾಕ್​ ತಂಡ ಅಲ್ಪಮಟ್ಟಿಗೆ ಮೇಲುಗೈ ಸಾಧಿಸುತ್ತಿತ್ತು. ಆದರೆ ಆ ಸಮಯದಲ್ಲಿ ಇನ್ನೂ ಅಫ್ರಿದಿ ಪಾಕಿಸ್ತಾನ ತಂಡದಲ್ಲಿ ಇರಲಿಲ್ಲ. ಈಗ ಅದು ಸಾಧಾರಣ ತಂಡವಾಗಿದೆ' ಎಂದು ಆಕಾಶ್​ ಚೋಪ್ರಾ ಯೂಟ್ಯೂಬ್​ ಚಾನಲ್​ಗೆ ತಿಳಿಸಿದ್ದಾರೆ.

'ಪಾಕಿಸ್ತಾನ ತಂಡದ ಶಕ್ತಿ ಆಗ ಪ್ರತಿಭೆ ಆಗಿತ್ತು. ಇಮ್ರಾನ್​ ಖಾನ್​ರಿಂದ ವಾಸಿಂ ಅಕ್ರಂ ಮತ್ತು ವಕಾರ್​ ಯೂನಿಸ್​ವರೆಗೆ ಎಲ್ಲರೂ ಪ್ರತಿಭಾವಂತರಾಗಿದ್ದರು. ಇದರಿಂದಾಗಿ ಅವರು ಉತ್ತಮ ನಿರ್ವಹಣೆ ತೋರುತ್ತಿದ್ದರು. ಅವರು ಭಾರತ ತಂಡವನ್ನು ಆಗ ಸೋಲಿಸುತ್ತಿದ್ದರು ಎಂಬುದು ಸುಳ್ಳಲ್ಲ. ಆದರೆ ಬಳಿಕ ಅಫ್ರಿದಿ ತಂಡಕ್ಕೆ ಬಂದ ಸಮಯದಲ್ಲಿ ಪರಿಸ್ಥಿತಿ ಬದಲಾಗಿತ್ತು. ಅವರು ನಿವೃತ್ತಿಯಾಗುವವರೆಗೂ ಇದು ಮುಂದುವರಿದಿತ್ತು' ಎಂದು ಆಕಾಶ್​ ಚೋಪ್ರಾ ವಿವರಿಸಿದ್ದಾರೆ.

ತಮ್ಮ ಮಾತಿಗೆ ಪೂರಕವಾಗಿ ಅಂಕಿ-ಅಂಶಗಳನ್ನೂ ನೀಡಿರುವ ಚೋಪ್ರಾ, 'ಅಫ್ರಿದಿ ತಂಡದಲ್ಲಿದ್ದ ಸಮಯದಲ್ಲಿ ನಾವು ಪಾಕ್​ ಜತೆಗೆ 15 ಟೆಸ್ಟ್​ ಆಡಿದ್ದು, ತಲಾ 5ರಲ್ಲಿ ಜಯಿಸಿದ್ದೇವೆ. ಏಕದಿನದಲ್ಲೂ ನಾವು ಪಾಕಿಸ್ತಾನಕ್ಕಿಂತ 2 ಪಂದ್ಯ ಹೆಚ್ಚು ಸೋತಿದ್ದೇವೆ. 82 ಏಕದಿನ ಪಂದ್ಯಗಳ ಪೈಕಿ ಭಾರತ 39ರಲ್ಲಿ ಜಯಿಸಿದ್ದರೆ, ಪಾಕಿಸ್ತಾನ 41ರಲ್ಲಿ ಗೆದ್ದಿದೆ. ಹೀಗಾಗಿ ಅಫ್ರಿದಿ ಮಾತಿನಲ್ಲಿ ಸತ್ಯಾಂಶವಿಲ್ಲ. 2 ಪಂದ್ಯ ಹೆಚ್ಚು ಸೋತಿರುವ ಕಾರಣಕ್ಕೆ ಯಾರಾದರೂ ಹೋಗಿ ಕ್ಷಮೆಯಾಚಿಸುವರೇ?' ಎಂದು ಹೇಳಿದ್ದಾರೆ.

'ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ. ಭಾರತ 7ರಲ್ಲಿ ಜಯಿಸಿದ್ದರೆ, ಪಾಕಿಸ್ತಾನ ಗೆದ್ದಿರುವುದು ಒಂದೇ ಪಂದ್ಯ. ಬಹುಶಃ ಅಫ್ರಿದಿ ಬೇರೇನನ್ನೋ ಹೇಳಲು ಹೋಗಿ ಇದನ್ನು ಹೇಳಿದ್ದಾರೆ. ಅವರ ಕಥೆ ಉಲ್ಟಾ ಆಗಿದೆ. ಯಾರೋ ಬುದ್ಧಿವಂತರು ಸರಿಯಾಗಿಯೇ ಹೇಳಿದ್ದಾರೆ, ಹಾವು ಕಚ್ಚಿದ್ದಕ್ಕೆ ಔಷಧಿ ಇದೆ. ಆದರೆ ತಪ್ಪು ಗ್ರಹಿಕೆಗೆ ಇಲ್ಲ ಎಂದು' ಎಂಬುದಾಗಿ ಚೋಪ್ರಾ, ಅಫ್ರಿದಿಗೆ ಟಾಂಗ್​ ನೀಡಿದ್ದಾರೆ.

ಭಾರತ ತಂಡ ಈಗ ಪಾಕಿಸ್ತಾನಕ್ಕಿಂತ ಸಾಕಷ್ಟು ಮೇಲ್ದರ್ಜೆಯಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ಚೋಪ್ರಾ, 'ವಿಶ್ವಕಪ್​ ದಾಖಲೆಗಳನ್ನೇ ಗಮನಿಸಿ ಭಾರತ ಸಾಕಷ್ಟು ಬಲಿಷ್ಠವಾಗಿದೆ. 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಸೋತಿರಬಹುದು. ಆದರೆ ಟೂರ್ನಿಯುದ್ದಕ್ಕೂ ಭಾರತ ಪ್ರಾಬಲ್ಯ ಸಾಧಿಸಿತ್ತು. ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಬಂದಿದೆ. ಪಾಕಿಸ್ತಾನ ತಂಡ ಆಸೀಸ್​ಗೆ ಹೋದಾಗಲೆಲ್ಲಾ ಭಾರಿ ಅಂತರದಿಂದ ಸೋತು ಬಂದಿದೆ. ಉಭಯ ತಂಡಗಳ ನಡುವೆ ಈಗ ಸಾಕಷ್ಟು ವ್ಯತ್ಯಾಸವಿದೆ' ಎಂದು ಮಾಜಿ ಆರಂಭಿಕ ಆಕಾಶ್​ ಚೋಪ್ರಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net