

ನವದೆಹಲಿ: ಕರೊನಾ ಹಾವಳಿಯಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿರುವ ಭಾರತೀಯರನ್ನು ತವರಿಗೆ ಮರಳಿ ಕರೆತರುವ 'ವಂದೇ ಭಾರತ್ ಮಿಷನ್' ಕಳೆದ ಕೆಲ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ. ವಿದೇಶದಲ್ಲಿದ್ದ ಭಾರತೀಯರನ್ನು ಮರಳಿ ಕರೆತಂದು ಅವರ ಕುಟುಂಬದ ಜತೆಗೆ ಸೇರಿಸುವ ಕೆಲಸ ನಡೆಯುತ್ತಲೇ ಇದೆ. ಇದೇ ವೇಳೆ 'ವಂದೇ ಭಾರತ್ ಮಿಷನ್'ನಲ್ಲಿ ತೊಡಗಿಕೊಂಡಿರುವವರು ತಮ್ಮ ಕುಟುಂಬದಿಂದ ದೂರ ಉಳಿಯುವಂತಾಗಿದೆ. ಏರ್ಲಿಫ್ಟ್ನಲ್ಲಿ ತೊಡಗಿಕೊಂಡಿರುವ ಬೋಯಿಂಗ್ 787 ಡ್ರೀಮ್ಲೈನರ್ನ ಕಮಾಂಡರ್ ಪುಷ್ಪಾಂಜಲಿ ಪೊಟ್ಸಂಗ್ಬಮ್ ಕಳೆದ 4 ತಿಂಗಳುನಿಂದ ಮಾಜಿ ಫುಟ್ಬಾಲ್ ತಾರೆಯಾಗಿರುವ ತಮ್ಮ ಪತಿ ಗೌರಮಂಗಿ ಸಿಂಗ್ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಈ ಮೂಲಕ ಕುಟುಂಬಕ್ಕಿಂತ ದೇಶ ಸೇವೆಯಲ್ಲಿಯೇ ಪುಷ್ಪಾಂಜಲಿ ಸಂತೃಪ್ತಿ ಕಾಣುತ್ತಿದ್ದಾರೆ.
ನವದೆಹಲಿ ಮೂಲದ ಏರ್ ಇಂಡಿಯಾದಲ್ಲಿ ಪೈಲಟ್ ಆಗಿರುವ ಮಣಿಪುರದ ಪುಷ್ಪಾಂಜಲಿ ಅವರ ದೇಶ ಸೇವೆಗೆ ಪತಿ ಗೌರಮಂಗಿ ಸಿಂಗ್ ಬೆಂಬಲವಾಗಿ ನಿಂತಿದ್ದಾರೆ. ಭಾರತ ಫುಟ್ಬಾಲ್ ತಂಡದ ಮಾಜಿ ಸೆಂಟ್ರಲ್ ಡಿಫೆಂಡರ್ ಆಗಿರುವ ಗೌರಮಂಗಿ, ಪತ್ನಿಯ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
'ಈ ಸಂಕಷ್ಟದ ಸಮಯದಲ್ಲಿ ನಮ್ಮ ಸ್ವಂತದವರೇ ದೇಶಕ್ಕೆ ಕೊಡುಗೆಯನ್ನು ನೀಡುತ್ತಿರುವುದು ವಿಶೇಷವಾದ ಅನುಭವವಾಗಿದೆ. ಆಕೆಯದ್ದು ಅತ್ಯಂತ ಕಠಿಣ ಮತ್ತು ಒತ್ತಡದ ಕೆಲಸ. ಇದೇ ರೀತಿ, ಆಕೆಯ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ಎಂದರೆ ಅದು ಸುಳ್ಳು ಹೇಳಿದಂತಾಗುತ್ತದೆ. ಯಾಕೆಂದರೆ ಕರೊನಾ ವೈರಸ್ ಭೀತಿಯ ನಡುವೆಯೇ ಆಕೆ ಮತ್ತು ಆಕೆಯ ಸಹೋದ್ಯೋಗಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ' ಎಂದು ಗೌರಮಂಗಿ ಸಿಂಗ್ ಹೇಳಿದ್ದಾರೆ. ಅವರು ಈಗ ಮಣಿಪುರದ ಇಂಪಾಲ್ನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಪುಷ್ಪಾಂಜಲಿ ಕಳೆದ 11 ವರ್ಷಗಳಿಂದ ಭಾರತದ ಅತಿದೊಡ್ಡ ವಿಮಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವಾರವಷ್ಟೇ ಆಕೆ ಆಫ್ರಿಕಾದ ಲಾಗೋಸ್ನಿಂದ ಭಾರತೀಯ ನಾಗರಿಕರನ್ನು ಕರೆತಂದಿದ್ದಳು ಎಂದು 34 ವರ್ಷದ ಗೌರಮಂಗಿ ತಿಳಿಸಿದ್ದಾರೆ. ಏರ್ಲಿಫ್ಟ್ಗಾಗಿ ವಿಮಾನದಲ್ಲಿ ಕಾರ್ಯನಿರ್ವಹಿಸುವ ವೇಳೆ 3 ಬಾರಿ ಕರೊನಾ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ನಿಗದಿತ ಸ್ಥಳಕ್ಕೆ ವಿಮಾನ ಏರುವ ಮುನ್ನ ಮತ್ತು ಅಲ್ಲಿಂದ ವಾಪಸಾದ ಬಳಿಕ ಈ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ವಾಪಸಾದ 5 ದಿನಗಳ ಬಳಿಕ ಮತ್ತೊಮ್ಮೆ ಏರ್ಲಿಫ್ಟ್ಗಾಗಿ ತೆರಳಬೇಕಾಗುತ್ತದೆ ಎಂದು ಗೌರಮಂಗಿ ತಿಳಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಪತ್ನಿಯನ್ನು ಭೇಟಿಯಾಗುವ ಹಂಬಲದಿಂದ ಗೌರಮಂಗಿ ಈಗ ನವದೆಹಲಿಗೆ ಆಗಮಿಸಿದ್ದಾರೆ. ಗೌರಮಂಗಿ 2006ರಿಂದ 2013ರ ನಡುವೆ ಭಾರತ ಪರ 71 ಪಂದ್ಯಗಳನ್ನು ಆಡಿದ್ದಾರೆ ಮತ್ತು 6 ಗೋಲು ಸಿಡಿಸಿದ್ದಾರೆ. ಅತ್ಯುತ್ತಮ ಡಿಫೆಂಡರ್ಗಳಲ್ಲಿ ಒಬ್ಬರಾಗಿದ್ದ ಅವರು ನ್ಯಾಷನಲ್ ಫುಟ್ಬಾಲ್ ಲೀಗ್, ಫೆಡರೇಷನ್ ಕಪ್, ಐ-ಲೀಗ್ ಪ್ರಶಸ್ತಿ ಗೆಲುವುಗಳನ್ನು ಕಂಡಿದ್ದಾರೆ. 2010ರಲ್ಲಿ ಎಐಎಫ್ಎಫ್ ವರ್ಷದ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಅವರು ಬೆಂಗಳೂರಿನ ಎಫ್ಸಿ ಬೆಂಗಳೂರು ಯುನೈಟೆಡ್ ತಂಡಕ್ಕೆ ಕೋಚ್ ಕೂಡ ಆಗಿದ್ದರು.