

ಮೆಲ್ಬೋರ್ನ್: ಆಲ್ರೌಂಡರ್ ಬೆನ್ಸ್ಟೋಕ್ಸ್ ಆಟದಿಂದ ಇಂಗ್ಲೆಂಡ್ ತಂಡ 2022ರ ಟಿ-20 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ ನೀಡಿದ 138 ರನ್ಗಳ ಸಾಧಾರಣ ಮೊತ್ತ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಉತ್ತಮವಾಗಿಯೇ ಬೌಲಿಂಗ್ ಮಾಡಿದ ಪಾಕಿಸ್ತಾನಿ ಬೌಲರ್ಗಳು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿದರು.
ಇಂಗ್ಲೆಂಡ್ನ ಒಬ್ಬೊಬ್ಬರೇ ಬ್ಯಾಟ್ಸ್ಮನ್ಗಳು ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿದ್ದಂತೆ, ಪಂದ್ಯದ ಕುತೂಹಲ ಹೆಚ್ಚಾಗುತ್ತಾ ಸಾಗಿತು. ಈ ಸಂದರ್ಭದಲ್ಲಿ ಯಾವ ತಂಡ ಈ ಬಾರಿ ಕಪ್ ಗೆಲ್ಲಬಹುದು ಎಂಬುವುದನ್ನು ಊಹಿಸಲೂ ಸಾಧ್ಯವಾಗದ ಹಂತಕ್ಕೆ ಪಂದ್ಯ ಸಾಗಿತು.
ಇನ್ನೇನು ಪಂದ್ಯದ ಗೆಲುವು ಪಾಕಿಸ್ತಾನದ ಕಡೆಗೆ ಸಾಗುತ್ತಿದೆ ಎನ್ನುವಾಗಲೇ ಆಲ್ರೌಂಡರ್ ಬೆನ್ಸ್ಟೋಕ್ಸ್ ಜವಾಬ್ದಾರಿಯುತ ಆಟಕ್ಕೆ ಮುಂದಾದರು. ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಮುಂದಾದರು. ಕ್ರಿಸ್ ಕಚ್ಚಿ ನಿಂತ ಸ್ಟೋಕ್ಸ್ ಪಾಕಿಸ್ತಾನದ ಬೌಲರ್ಗಳ ಮೇಲೆ ಒತ್ತಡ ಹೇರಲು ಆರಂಭಿಸಿದರು.
ಬೆನ್ಸ್ಟೋಕ್ಸ್ ಫೈನಲ್ ಪಂದ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗದೇ ಇರುತ್ತಿದ್ದರೆ, ಇಂಗ್ಲೆಂಡ್ಗೆ ಗೆಲ್ಲುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಸ್ಟೋಕ್ಸ್ 52 ರನ್ ಗಳಿಸುವ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ 2022ರ ಟಿ-20 ವಿಶ್ವಕಪ್ನ್ನು ಇಂಗ್ಲೆಂಡ್ ತಂಡ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವತ್ತು ವಿಲನ್... ಇಂದು ಹೀರೋ..!
ಹೌದು, 2016ರ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸಿತ್ತು. ಅಂದಿನ ಬಲಿಷ್ಠ ವೆಸ್ಟ್ಇಂಡೀಸ್ ತಂಡ ಎದುರಾಳಿ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ವೆಸ್ಟ್ಇಂಡೀಸ್ ತಂಡಕ್ಕೆ ಗೆಲುವು ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಆಗಿದ್ದೇ ಬೇರೆ.
ಕೊನೆಯ ಓವರ್ನಲ್ಲಿ ವೆಸ್ಟ್ಇಂಡೀಸ್ ತಂಡಕ್ಕೆ ಗೆಲ್ಲಲು 19 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್ಸ್ಟೋಕ್ಸ್ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಬ್ರಾತ್ವೈಟ್ ಸ್ಟೋಕ್ಸ್ ಎಸೆತದಲ್ಲಿ ಒಂದರ ಹಿಂದೆ ಒಂದರಂತೆ 4 ಸಿಕ್ಸ್ ಸಿಡಿಸುವ ಮೂಲಕ ವೆಸ್ಟ್ಇಂಡೀಸ್ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದರು.
ಕೊನೆಯ ಓವರ್ನಲ್ಲಿ 4 ಸಿಕ್ಸರ್ ನೀಡಿ, ಇಂಗ್ಲೆಂಡ್ ಸೋಲಿಗೆ ಪ್ರಮುಖ ಕಾರಣವಾಗಿದ್ದ ಬೆನ್ಸ್ಟೋಕ್ಸ್ ಅಂದು ಸಾಕಷ್ಟು ಟೀಕೆ ಎದುರಿಸಿದ್ದರು. ಆದರೆ ಇದೀಗ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.