IPL ಮೆಗಾ ಹರಾಜಿನಲ್ಲಿ ಈ 5 ಸ್ಟಾರ್ ಆಟಗಾರರಿಗೆ ಗೇಟ್​ಪಾಸ್ ಗ್ಯಾರಂಟಿ​! ಹೆಸರು ಕೇಳಿದ್ರೆ ಹುಬ್ಬೇರೋದು ಖಚಿತ

ವಿಜಯವಾಣಿ - 2024-09-24T105139.687
Published on

ನವದೆಹಲಿ: ಐಪಿಎಲ್​ 18ನೇ ಆವೃತ್ತಿ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ರೋಹಿತ್ ಶರ್ಮ, ಕೆ.ಎಲ್. ರಾಹುಲ್, ರಿಷಭ್ ಪಂತ್, ಡೇವಿಡ್​ ವಾರ್ನರ್​ ಹೀಗೆ ಒಂದಷ್ಟು ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಈ ಮಧ್ಯೆ ಸ್ಫೋಟಕ ವರದಿಯೊಂದು ಹೊರಬಿದ್ದಿದ್ದು, ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಐದು ಸ್ಟಾರ್​ ಆಟಗಾರರನ್ನು ರಿಲೀಸ್ ಮಾಡಲು ಆಯಾ ಫ್ರಾಂಚೈಸಿಗಳು ನಿರ್ಧರಿಸಿವೆ ಎಂದು ಹೇಳಲಾಗಿದೆ. ಅಸಲಿಗೆ ಯಾರು ಆ ಆಟಗಾರರು? ಎಂಬುದರ ವಿವರ ಈ ಕೆಳಕಂಡಂತಿದೆ ನೋಡಿ.

1. ನಿತಿಶ್​ ಕುಮಾರ್​ ರೆಡ್ಡಿ (ಸನ್​ರೈಸರ್ಸ್​ ಹೈದರಾಬಾದ್​)

2024ರಲ್ಲಿ ಸನ್​ರೈಸರ್ಸ್​ ಪರ ಆದ್ಭುತ ಆಲ್​ರೌಂಡರ್​ ಪ್ರದರ್ಶನ ತೋರಿದ ನಿತೀಶ್ ಕುಮಾರ್​, ತಂಡದ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದರು. 17ನೇ ಆವೃತ್ತಿಯಲ್ಲಿ 33.67ರ ಸರಾಸರಿಯಲ್ಲಿ 303 ರನ್ ಕಲೆಹಾಕಿದ ನಿತೀಶ್​, 142.92 ಸ್ಟ್ರೈಕ್ ರೇಟ್‌ ಹೊಂದಿದ್ದರು. ಹೈದರಾಬಾದ್​ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ಗೆ ಬರುತ್ತಿದ್ದ ಇವರು, ತಂಡದ ಒಟ್ಟು ಮೊತ್ತ ಹೆಚ್ಚಿಸುವಲ್ಲಿ ಉತ್ತಮ ಕೊಡುಗೆ ನೀಡಿದರು. ಸದ್ಯ ಇಂತಹ ಪ್ರತಿಭಾವಂತ ಸ್ಟಾರ್​ ಕ್ರಿಕೆಟಿಗನನ್ನು ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ತಂಡದಿಂದ ಕೈಬಿಡುವ ಸಾಧ್ಯತೆಗಳೇ ಹೆಚ್ಚಿದೆ.

2. ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್​)

ಕಳೆದ ಸೀಸನ್​ನಲ್ಲಿ ಯಾವಾಗ ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅಧಿಕಾರ ವಹಿಸಿಕೊಂಡರೋ ಅಂದಿನಿಂದಲೂ ರೋಹಿತ್ ಇತರೆ ತಂಡ ಸೇರುವುದು ಪಕ್ಕಾ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು. ಒಂದಷ್ಟು ವರದಿಗಳ ಪ್ರಕಾರ, 2025ರ ಐಪಿಎಲ್​ನಲ್ಲಿ 'ಹಿಟ್​ಮ್ಯಾನ್'​ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ ಎನ್ನಲಾಗಿದೆ. ರೋಹಿತ್ ಪಂಜಾಬ್ ಸೇರ್ತಾರಾ ಅಥವಾ ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಆಗಿ ಟೀಮ್​ ಪಾಲಾಗಲಿದ್ದಾರಾ ಎಂಬುದು ಸದ್ಯದ ಮಟ್ಟಿಗೆ ಅಸ್ಪಷ್ಟ. ಆದ್ರೆ, ಮುಂಬೈ ಇಂಡಿಯನ್ಸ್ ತೊರೆಯುವುದು ಖಚಿತ ಎಂದು ವರದಿ ಉಲ್ಲೇಖಿಸಿದೆ. ಈ ವಿಷಯದಲ್ಲಿ ಫ್ರಾಂಚೈಸಿ ಕೂಡ ನಿರ್ಧರಿಸಿದ್ದು, ಆಕ್ಷನ್​ನಲ್ಲಿ ರೋಹಿತ್​​ರನ್ನು ಕೈಬಿಡಲು ಚಿಂತಿಸಿದೆ.

3. ಶಿವಂ ದುಬೆ (ಚೆನೈ ಸೂಪರ್ ಕಿಂಗ್ಸ್​)

17ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಅದ್ಭುತ ಆಲ್​ರೌಂಡ್ ಪ್ರದರ್ಶನ ನೀಡಿದ ಶಿವಂ ದುಬೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದು ಎದುರಾಳಿಗಳ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಸಿಎಸ್​ಕೆ ಪರ ಮೊದಲಾರ್ಧದಲ್ಲಿ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ದುಬೆ ತದನಂತರದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್​ ಒಪ್ಪಿಸಿ, ತಮ್ಮ ತಂಡವನ್ನು ಸಂಕಷ್ಟಕ್ಕೆ ದೂಡಿದ್ದು ಇದೆ. ಪ್ರಸ್ತುತ ಈ ಬಾರಿ ನಡೆಯಲಿರುವ ಆಕ್ಷನ್ ಪ್ರಕ್ರಿಯೆಯಲ್ಲಿ ಶಿವಂರನ್ನು ಕೈಬಿಡುವ ಎಲ್ಲಾ ಲಕ್ಷಣಗಳಿದ್ದು, ಅದಕ್ಕೆ ಕಾರಣ ರುತುರಾಜ್ ಗಾಯಕ್ವಾಡ್​. ಕ್ಯಾಪ್ಟನ್​ ಆಗಿ ಗಾಯಕ್ವಾಡ್ ಮುಂದಿನ ಸೀಸನ್​ ಮುನ್ನಡೆಸಿದರೆ, ತಂಡದ ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ, ಪತಿರಾನಾ ಮತ್ತು ಎಂ.ಎಸ್. ಧೋನಿ ರಿಟೆನ್​ಷನ್​ ಸ್ಥಾನದಲ್ಲಿರುವ ಹಿನ್ನೆಲೆ ದುಬೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಫ್ರಾಂಚೈಸಿ ಶಿವಂರನ್ನು ರಿಲೀಸ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

4. ಫಾಫ್ ಡು ಪ್ಲೆಸಿಸ್​ (ರಾಯಲ್ ಚಾಲೆಂಜರ್ಸ್​ ಬೆಂಗಳೂರು)

ಆರ್​ಸಿಬಿ ಕ್ಯಾಪ್ಟನ್ ಆಗಿ ತಂಡದ ಜವಾಬ್ದಾರಿ ಹೊತ್ತ ಫಾಫ್ ಡು ಪ್ಲೆಸಿಸ್​, ಈ ಬಾರಿ ಬೆಂಗಳೂರು ಪಡೆಯನ್ನು ಪ್ಲೇಆಫ್ ಹಂತದವರೆಗೂ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದೇ ಆದರೂ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಇದು ಆರ್​ಸಿಬಿ ಅಭಿಮಾನಿಗಳಿಗೆ ಅತೀವ ಬೇಸರ ಉಂಟುಮಾಡಿತ್ತು. ಆರಂಭದಿಂದಲೂ ಹೀನಾಯ ಸೋಲುಂಡ ತಂಡದ ಪರ ಅಬ್ಬರದ ಬ್ಯಾಟಿಂಗ್ ದಾಳಿ ನಡೆಸಿದರೂ ಕೂಡ ನಾಯಕತ್ವದಲ್ಲಿ ಎಡವಿದ ಫಾಫ್​, ತಮ್ಮ ಬ್ಯಾಟಿಂಗ್​ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಲ್ಲಲ್ಲಿ ಎಡವಿದರು. ಸೀಸನ್​ ಪೂರ ಅತ್ಯಧಿಕ ರನ್​ ಕಲೆಹಾಕಿದ ವಿರಾಟ್​ಗೆ ಆರಂಭಿಕ ಬ್ಯಾಟರ್​ ಆಗಿ ಡು ಪ್ಲೆಸಿಸ್​ ಸಾಥ್​ ಕೊಡಬಹುದಿತ್ತು. ಆದ್ರೆ, ಅದನ್ನು ಮಾಡಲಿಲ್ಲ ಎಂಬ ವಿಷಯವು ಅಂದು ಭಾರೀ ಚರ್ಚೆಯಾಗಿತ್ತು. ಇದೀಗ ಫಾಫ್​ರನ್ನು ಫ್ರಾಂಚೈಸಿ ಕೈಬಿಡಬಹುದು ಎಂಬ ಮಾತುಗಳೇ ಸದ್ಯ ಜೋರಾಗಿವೆ.

5. ವೆಂಕಟೇಶ್ ಅಯ್ಯರ್​ ( ಕೊಲ್ಕತ ನೈಟ್ ರೈಡರ್ಸ್​)

2024ರ ಐಪಿಎಲ್ ಚಾಂಪಿಯನ್ಸ್​ ಪಟ್ಟವನ್ನು ಮುಡಿಗೇರಿಸಿಕೊಂಡ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್ ನಾಯಕತ್ವದ ಕೆಕೆಆರ್ ತಂಡದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದು ವೆಂಕಟೇಶ್ ಅಯ್ಯರ್​. ಆರಂಭಿಕನಾಗಿ ಬರಲಿ ಅಥವಾ ಮಿಡಲ್ ಆರ್ಡರ್​​ನಲ್ಲಿಯೇ ಬರಲಿ ತಮ್ಮ ಬ್ಯಾಟಿಂಗ್​ ಆರ್ಭಟವನ್ನು ಕಿಂಚಿತ್ತು ಕಡಿಮೆ ಮಾಡಿಕೊಳ್ಳದ ಅಯ್ಯರ್​, ಈ ಸೀಸನ್​ನಲ್ಲಿ ಸ್ಟೇಡಿಯಂ ಪೂರ ಬಾಲ್​ಗಳನ್ನು ಸಿಕ್ಸರ್​, ಫೋರ್​​ ಸಿಡಿಸುವ ಮುಖೇನ ತಂಡದ ಮೊತ್ತ ಮತ್ತು ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾದರು. ಅಸಲಿಗೆ ಇಂತಹ ಪ್ರತಿಭಾವಂತ ಆಟಗಾರರನ್ನು ಫ್ರಾಂಚೈಸಿಗಳು ಹೇಗೆ ರಿಲೀಸ್ ಮಾಡಿ, ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net