

ಲಂಡನ್: ಮೊದಲ ಓವರ್ನಲ್ಲೇ 4 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ 20 ಬ್ಲ್ಯಾಸ್ಟ್ ಸರಣಿಯಲ್ಲಿ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ವಿಶ್ವದಾಖಲೆ ಬರೆದಿದ್ದಾರೆ.
ಟಿ 20 ಬ್ಲ್ಯಾಸ್ಟ್ ಸರಣಿಯಲ್ಲಿ ನಾಟ್ಟಿಂಗ್ಹ್ಯಾಮ್ಶೈರ್ ಪರ ಆಡುತ್ತಿರುವ ಶಾಹೀನ್ ಅಫ್ರಿದಿ ಶುಕ್ರವಾರ ಬರ್ಮಿಂಗ್ಹ್ಯಾಮ್ ಬಿಯರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. ಮೊದಲ ಓವರ್ನಲ್ಲೇ 4 ವಿಕೆಟ್ ಪಡೆದರೂ ನಾಟ್ಟಿಂಗ್ಹ್ಯಾಮ್ಶೈರ್ ತಂಡ ಎರಡು ವಿಕೆಟ್ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು.
ರಾಬ್ ಯೇಟ್ಸ್ (46 ಎಸೆತ 65 ರನ್) ಅವರ ಅಬ್ಬರ ಆಟದ ನೆರವಿನಿಂದ ಬರ್ಮಿಂಗ್ಹ್ಯಾಮ್ ಬಿಯರ್ಸ್ ತಂಡ ವಿಜಯೋತ್ಸವ ಆಚರಿಸಿತು. ರೋಚಕ ಪಂದ್ಯದಲ್ಲಿ ಸೋಲುಂಡ ನಾಟ್ಟಿಂಗ್ಹ್ಯಾಮ್ಶೈರ್ ಕ್ವಾರ್ಟರ್ಫೈನಲ್ ಪ್ರವೇಶಿಸಲು ವಿಫಲವಾಯಿತು. ಆದರೂ ಶಾಹೀನ್ ಅವರ ಬೌಲಿಂಗ್ ಮಾತ್ರ ಎಲ್ಲರ ಗಮನ ಸೆಳೆಯಿತು.
ಮೊದಲ ಓವರ್ನಲ್ಲಿ ಅಲೆಕ್ಸ್ ಡೆವಿಸ್ (0), ಕ್ರಿಸ್ ಬೆಂಜಮಿನ್ (0), ಡಾನ್ ಮೌಸ್ಲಿ (1) ಮತ್ತು ಎಡ್ ಬರ್ನಾರ್ಡ್ (0) ಅವರನ್ನು ಔಟ್ ಮಾಡಿದರು. ಎರಡನೇ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಯಾರ್ಕರ್ ಮೂಲಕ ಶಾಹೀನ್, ಡೆವಿಸ್ ಅವರನ್ನು ಎಲ್ಬಿ ಡಬ್ಲ್ಯು ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಬೆಂಜಮಿನ್ ಬೋಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಓವರ್ನ ಐದನೇ ಎಸೆತದಲ್ಲಿ ನೌಸ್ಲಿ ಕ್ಯಾಚಿತ್ತು ನಿರ್ಗಮಿಸಿದರು ಮತ್ತು ಓವರ್ನ ಕೊನೆಯ ಎಸೆತದಲ್ಲಿ ಬರ್ನಾರ್ಡ್ ಕ್ಲೀನ್ ಬೋಲ್ಡ್ ಆಗಿ ಡಗೌಟ್ ಕಡೆ ತೆರಳಿದರು.
ಶಾಹೀನ್ ನಾಲ್ಕು ವಿಕೆಟ್ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಶಾಹೀನ್ ಪ್ರಯತ್ನ ಕೈಗೂಡಲಿಲ್ಲ ಎಂಬ ಬೇಸರವೂ ಇದೆ. ಶಾಹೀನ್ ಪ್ರಯತ್ನವನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಯೇಟ್ಸ್ ವಿಫಲಗೊಳಿಸಿದರು. ಮೊದಲು ಬ್ಯಾಟ್ ಮಾಡಿದ ನಾಟ್ಟಿಂಗ್ಹ್ಯಾಮ್ಶೈರ್ ತಂಡ 169 ರನ್ ಗಳಿಸಿತ್ತು ಮತ್ತು ಬರ್ಮಿಂಗ್ಹ್ಯಾಮ್ ಬಿಯರ್ಸ್ ತಂಡ 8 ವಿಕೆಟ್ ನಷ್ಟದೊಂದಿಗೆ ಗುರಿ ಮುಟ್ಟಿತು. (ಏಜೆನ್ಸೀಸ್)