

ನವದೆಹಲಿ: ಐಪಿಎಲ್ 2024ರ ಆವೃತ್ತಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದ್ವಿತೀಯಾರ್ಧದಲ್ಲಿ ಯಾರೂ ಊಹಿಸಲಾರದ ಪ್ರದರ್ಶನ ನೀಡಿ, ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ರೋಚಕವಾಗಿ ಎಂಟ್ರಿ ಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್ಬ್ಯಾಕ್ ಎಂದರೆ ತಪ್ಪಾಗಲಾರದು. 16 ವರ್ಷಗಳಿಂದ ಒಂದೇ ಒಂದು ಬಾರಿಯೂ ಕಪ್ ನೋಡದ ಫ್ರಾಂಚೈಸಿ 17ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿಯುವ ಭರವಸೆ ನೀಡಿತ್ತು. ಆದ್ರೆ, ಅಂತಿಮವಾಗಿ ಆರ್ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ ಪಡೆ 4 ವಿಕೆಟ್ ಅಂತರದಿಂದ ಗೆದ್ದು ಕ್ವಾಲಿಫೈರ್ 2 ಪಂದ್ಯ ಆಡುವ ಅರ್ಹತೆ ಪಡೆದು, ಬೆಂಗಳೂರು ಪಡೆಯ ಕಪ್ ಕನಸನ್ನು ಮತ್ತೊಮ್ಮೆ ಭಗ್ನಗೊಳಿಸಿತು.
ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರುವ ಪ್ರಕಾರ, 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಆಡಿರುವ ಅಷ್ಟು ಸೀಸನ್ಗಳ ಅಷ್ಟು ಮ್ಯಾಚ್ಗಳಲ್ಲಿ ಮನರಂಜನೆ ಕೊಡುವಲ್ಲಿ ಮಾತ್ರ ಎಂದಿಗೂ ವಿಫಲಗೊಂಡಿಲ್ಲ. ಆರ್ಸಿಬಿ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ರನ್ ಮಷಿನ್ ವಿರಾಟ್ ಕೊಹ್ಲಿ ಅವರೇ ಬ್ರ್ಯಾಂಡ್. ವಿರಾಟ್ರ ಉಪಸ್ಥಿತಿ ಟೀಮ್ನಲ್ಲಿದ್ದರೆ ಸಾಕು ಫ್ಯಾನ್ಸ್ಗೆ ಬೇರೇನೂ ಬೇಕಿಲ್ಲ. ಎಲ್ಲರಂತೆ ತಮ್ಮ ತಂಡ ಕೂಡ ಒಂದು ಬಾರಿ ಕಪ್ ಗೆಲ್ಲಲಿ ಎಂಬ ಮಹಾದಾಸೆ ಹೊತ್ತು ಸ್ಟೇಡಿಯಂಗೆ ಬರುತ್ತಾರೆಯೇ ಹೊರತು ಸೋತ ತಕ್ಷಣ ಟೀಕಿಸಿ, ತಮ್ಮ ನೆಚ್ಚಿನ ಆಟಗಾರರನ್ನು ಕೆಳಗೆ ಹಾಕಿ ಮಾತನಾಡುವುದಿಲ್ಲ.
2008ರಿಂದಲೂ ಆರ್ಸಿಬಿ ಅಭಿಮಾನಿಗಳ ಬಳಗ ದೊಡ್ಡದಾಗಿದೆಯೇ ವಿನಃ ಚಿಕ್ಕದಾಗಲೇ ಇಲ್ಲ, ಸಣ್ಣದಾಗಿಯೂ ಕಾಣಿಸಲಿಲ್ಲ. ತಮ್ಮನ್ನು ನೋಡಿ, ಪ್ರತಿ ಪಂದ್ಯದಲ್ಲೂ ಹುರಿದುಂಬಿಸುವ ಅಪಾರ ಸಂಖ್ಯೆಯ ನಿಷ್ಠಾವಂತ ಫ್ಯಾನ್ಸ್ಗೆ ಗೆಲುವಿನ ಕಿರೀಟ ತೊಡಿಸಬೇಕು ಎಂದು ಪಣತೊಟ್ಟಿರುವ ವಿರಾಟ್ ಕೊಹ್ಲಿ, ಇದೊಂದಕ್ಕಾಗಿ ಮೈದಾನದಲ್ಲಿ ಇಂದಿಗೂ ಚಿರ ಯುವಕನಂತೆ ಓಡಾಡಿ, ಗೆಲುವಿಗಾಗಿ ಶ್ರಮಿಸುತ್ತಾರೆ. ಇಷ್ಟಾದರೂ ಸಹ 17ನೇ ಆವೃತ್ತಿಯಲ್ಲಿಯೂ ಸಹ ಟ್ರೋಫಿಗೆ ಮುತ್ತಿಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ಯಾನ್ಸ್ ಕೊಂಚ ನಿರಾಸೆಗೊಂಡಿದ್ದೇ ಆದರೂ 'ಮುಂದಿನ ಸಲ ಕಪ್ ನಮ್ದೇ' ಎಂಬ ಅದೇ ಭರವಸೆ, ಪ್ರೀತಿ, ಅಭಿಮಾನವನ್ನು ಬಿಡದೆ ಮುಂದುವರೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ರೋಟರಿ ಕ್ಲಬ್ ನಿಂದ ಕೃತಕ ಕಾಲು ಜೋಡಣೆ
ಅಸಲಿಗೆ ಐಪಿಎಲ್ ಇತಿಹಾಸದಲ್ಲಿಯೇ ಆರ್ಸಿಬಿ ಅತ್ಯುತ್ತಮ ಫ್ರಾಂಚೈಸಿ ಎಂದರೆ ಖಂಡಿತ ತಪ್ಪಾಗಲಾರದು. ಒಂದೇ ಒಂದು ಬಾರಿ ಟ್ರೋಫಿ ನೋಡದಿದ್ದರೂ ಕೂಡ ಅಭಿಮಾನಿಗಳ ನೆಚ್ಚಿನ, ಅಚ್ಚುಮೆಚ್ಚಿನ ಫ್ರಾಂಚೈಸಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದೆ. ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಮೂರು ವಿಷಯಗಳಿಂದ ಬೆಸ್ಟ್ ಫ್ರಾಂಚೈಸಿ ಎಂಬುದನ್ನು ನಾವು ಇಲ್ಲಿ ವಿವರಿಸಬಹುದು. ಅದು ಹೇಗೆ? ಎಂಬುದಕ್ಕೆ ಈ ಕೆಳಗಿನ ಕಾರಣಗಳನ್ನು ಗಮನಿಸಿ.
1. ವಿರಾಟ್ ಕೊಹ್ಲಿ ಪ್ರಭಾವ:
ಕ್ರಿಕೆಟ್ ಜಗತ್ತಿನ ದಂತಕಥೆ ವಿರಾಟ್. ಟೀಮ್ ಇಂಡಿಯಾ ಪರ ಸಾಕಷ್ಟು ದಾಖಲೆಗಳನ್ನು ತಮ್ಮ ಬ್ಯಾಟ್ನಿಂದಲೇ ಬರೆದಿರುವ ವಿರಾಟ್, ದೇಶವ್ಯಾಪಿ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಆರ್ಸಿಬಿಯ ಹೃದಯಬಡಿತ ಆಗಿರುವ ಕೊಹ್ಲಿ, ಬೆಂಗಳೂರು ತಂಡದಲ್ಲಿ ದೊಡ್ಡ ಪಾತ್ರವನ್ನೇ ನಿರ್ವಹಿಸುತ್ತಾರೆ. ಫ್ರಾಂಚೈಸಿಯ ಅಭಿಮಾನಿಗಳು ಇಲ್ಲಿ ಟೀಮ್ಗಿಂತ 'ರನ್ ಮಷಿನ್'ರನ್ನು ನೋಡಲು, ಪ್ರೋತ್ಸಾಹಿಸಲು ಬರುವುದೇ ಗಮನಾರ್ಹ. ಹುಚ್ಚು ಪ್ರೀತಿಯನ್ನು ವ್ಯಕ್ತಪಡಿಸುವ ಫ್ಯಾನ್ಸ್, ವಿರಾಟ್ ಮೈದಾನಕ್ಕೆ ಬಂದ್ರೆ ಮಾತ್ರ ತಮ್ಮ ಎನರ್ಜಿಯನ್ನು ಪ್ರದರ್ಶಿಸಲು ಬಯಸುತ್ತಾರೆ.
2. ಅತ್ಯುತ್ತಮ ಬ್ರ್ಯಾಂಡಿಂಗ್ ಮತ್ತು ಅಭಿಮಾನಿ ಬಳಗ:
ತಮ್ಮ ಫ್ರಾಂಚೈಸಿಯ ಬ್ರ್ಯಾಂಡಿಂಗ್ ಅನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಭಿಮಾನಿಗಳ ಜತೆ ಉತ್ತಮ ಒಡನಾಟ ಹೊಂದಿದೆ. ಪಂದ್ಯ, ಆಟಗಾರರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಾಗೂ ಫ್ಯಾನ್ಸ್ಗಳೊಂದಿಗೆ ಸಂಭಾಷಣೆ ನಡೆಸುವುದು, ಕಿರು ಸಂದರ್ಶನಗಳನ್ನು ಏರ್ಪಡಿಸುವುದು ಹೀಗೆ ನಾನಾ ರೀತಿಯಲ್ಲಿ ತಮ್ಮ ಅಭಿಮಾನಿ ಬಳಗವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದೆ. ಸೋಲೇ ಇರಲಿ, ಗೆಲುವೇ ಇರಲಿ ನಿರಂತರವಾಗಿ ಫ್ಯಾನ್ಸ್ಗಳ ಮನವಿ, ಅಭಿಪ್ರಾಯಗಳನ್ನು ಸ್ವೀಕರಿಸುತ್ತ ಬಂದಿದೆ.
3. ಆಟದ ವೈಖರಿ, ತಂಡದ ಪ್ರದರ್ಶನ:
ವಿರಾಟ್ರನ್ನು ಹೊರತುಪಡಿಸಿ ನೋಡುವುದಾದರೆ ತಂಡದ ಇತರೆ ಆಟಗಾರರು ಕೂಡ ಅದ್ಭುತ ಪ್ರದರ್ಶನ ತೋರುವ ಮುಖೇನ ಕ್ರಿಕೆಟ್ ಪ್ರಿಯರಲ್ಲಿ ಉತ್ಸಾಹ ಹೆಚ್ಚಿಸುತ್ತಾರೆ. ಕೇವಲ ಆಟ ಮಾತ್ರವಲ್ಲದೇ ಕ್ರೀಡಾಸ್ಪೂರ್ತಿಯನ್ನು ಮೆರೆಯುವ ಕ್ರಿಕೆಟಿಗರು ಮೈದಾನದಲ್ಲಿ ಒಳ್ಳೆಯ ಕ್ಷಣಗಳನ್ನು ತಮಗೆ ಹಾಗೂ ತಮ್ಮ ಫ್ಯಾನ್ಸ್ಗಳಿಗೆ ರೂಪಿಸಿಕೊಟ್ಟಿದ್ದಾರೆ. ಈ ಹಿಂದೆ ಕ್ರೀಸ್ ಗೇಲ್, ಎಬಿ ಡಿವಿಲಿಯರ್ಸ್ ತಮ್ಮ ಬ್ಯಾಟಿಂಗ್ ಆರ್ಭಟದ ಮುಖೇನವೇ ಅಪಾರ ಸಂಖ್ಯೆಯ ಫ್ಯಾನ್ಸ್ಗಳನ್ನು ಮನರಂಜಿಸಿ, ಅವರ ಪ್ರೀತಿಯನ್ನು ಗಳಿಸಿ, ದಾಖಲೆಗಳನ್ನು ನೆನಪಾಗಿ ಬಿಟ್ಟುಹೋಗಿದ್ದಾರೆ. ಈ ಎಲ್ಲಾ ಅಂಶಗಳು ಆರ್ಸಿಬಿ ಐಪಿಎಲ್ನ ಬೆಸ್ಟ್ ಫ್ರಾಂಚೈಸಿ ಎಂಬುದನ್ನು ಒತ್ತಿ ಹೇಳುತ್ತದೆ,(ಏಜೆನ್ಸೀಸ್).