

ಬೆಂಗಳೂರು: ಈ ಬಾರಿ ನಡೆದ ಎರಡು ದಿನಗಳ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಹಾಗೂ ಯುವ ಆಟಗಾರರನ್ನೇ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ನಂತರದಲ್ಲಿ ಉತ್ತಮ ಖರೀದಿಯನ್ನು ಮಾಡಿದ ಟೀಮ್ ಎಂಬ ಪಟ್ಟಿಗೆ ಸೇರ್ಪಡೆಗೊಂಡಿತು. ಒಂದೆಡೆ ಆರ್ಸಿಬಿ ಆಯ್ದುಕೊಂಡ ಆಟಗಾರರು ಫ್ಯಾನ್ಸ್ಗಳ ಲೆಕ್ಕಾಚಾರವನ್ನು ಮೊದಲಿಗೆ ದಿಕ್ಕರಿಸಿದ್ದೇ ಆದರೂ ಅಂತಿಮ ಪಟ್ಟಿಯಲ್ಲಿ ಖುಷಿ ನೀಡಿತು. ಏಕೆಂದೆರೆ, ಆಕ್ಷನ್ನ ಎರಡನೇ ದಿನದ ಅಂತ್ಯದಲ್ಲಿ ಮ್ಯಾನೇಜ್ಮೆಂಟ್ ಬಹುನಿರೀಕ್ಷಿತ ಕ್ರಿಕೆಟಿಗರನ್ನೇ ತಮ್ಮ ತೆಕ್ಕೆಗೆ ಖರೀದಿ ಮಾಡಿಕೊಂಡಿತು. ಸದ್ಯ 2025ರ ಏಪ್ರಿಲ್ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗಾಗಿ ಕಾತರ ಹೊರಹಾಕಿರುವ ಫ್ಯಾನ್ಸ್ಗಳು, ಯಾರು 18ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುತ್ತಾರೆ, ಯಾರ ಮುಡಿಗೆ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ (Purple Cap) ಹೋಗಲಿದೆ ಎಂಬ ಲೆಕ್ಕಾಚಾರವನ್ನು ಇಂದಿನಿಂದಲೇ ಆರಂಭಿಸಿದ್ದಾರೆ. ಈ ಬಗ್ಗೆ ಒಂದಷ್ಟು ವರದಿಗಳು ಕೂಡ ಹೊರಬಿದ್ದಿವೆ.
ಐಪಿಎಲ್ ಆವೃತ್ತಿಯ ಅಂತ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್ ದೊರಕಿದರೆ, ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ಗೆ ಪರ್ಪಲ್ ಕ್ಯಾಪ್ ನೀಡಲಾಗುವುದು. ಸದ್ಯ ಮುಂಬರುವ ಐಪಿಎಲ್ 18ನೇ ಸೀಸನ್ನಲ್ಲಿ ಆರ್ಸಿಬಿಯ ಈ ಮೂವರು ಬೌಲರ್ಗಳು ಪರ್ಪಲ್ ಕ್ಯಾಪ್ ಗಳಿಸುವ ಅವಕಾಶವಿದೆ ಎಂದು ಕ್ರಿಕೆಟ್ ವರದಿಯೊಂದು ಉಲ್ಲೇಖಿಸಿದೆ. 2008ರಿಂದ 2024ರವರೆಗೆ ಒಂದು ಬಾರಿಯೂ ಐಪಿಎಲ್ ಟ್ರೋಫಿ ಎತ್ತದ ಆರ್ಸಿಬಿಗೆ 2025ರಲ್ಲಿ ಕಪ್ ಗೆಲ್ಲಲು ಈ ಮೂವರು ಸ್ಟಾರ್ ಬೌಲರ್ಗಳು ಸಹಾಯ ಮಾಡಲಿದ್ದಾರೆ ಎಂಬುದು ಸದ್ಯ ಅಭಿಮಾನಿಗಳ ಮಹಾದಾಸೆ.
ಪ್ರತಿಬಾರಿ ಬ್ಯಾಟಿಂಗ್ ಲೈನ್ ಮಾತ್ರ ಬಲಿಷ್ಠ ಪಡಿಸುತ್ತಿದ್ದ ಫ್ರಾಂಚೈಸಿ, ಈ ಬಾರಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನು ಗಟ್ಟಿಗೊಳಿಸಿದೆ. ಇದು ಫ್ಯಾನ್ಸ್ಗಳಲ್ಲಿ ಅಪಾರ ಭರವಸೆ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ. ಪ್ರಸ್ತುತ ಆರ್ಸಿಬಿ ತಂಡದಲ್ಲಿರುವ ಮೂವರು ಬಲಿಷ್ಠ ಬೌಲರ್ಗಳು ಜೋಶ್ ಹೆಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ನುವಾನ್ ತುಸಾರ. ಇವರೆಲ್ಲರೂ ಕೂಡ ವೇಗಿಗಳೇ ಆಗಿರುವುದು ಸದ್ಯ ಆರ್ಸಿಬಿಗೆ ಬೌಲಿಂಗ್ ಯೂನಿಟ್ಗೆ ಆನೆಬಲ ನೀಡಿದಂತಾಗಿದೆ.
ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ಪಡೆದ ವಿರಾಟ್ ಕೊಹ್ಲಿ, ಸೀಸನ್ ಪೂರ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಕಳಪೆ ಮಟ್ಟಕ್ಕೆ ಕೊಂಡೊಯ್ಯಲಿಲ್ಲ. ಪಂದ್ಯಗಳಲ್ಲಿ ಸೋಲು ಕಂಡರೂ ವಿರಾಟ್ ಬ್ಯಾಟಿಂಗ್ ಅಬ್ಬರಕ್ಕೆ ಮಾತ್ರ ಯಾವುದೇ ಅಡೆ-ತಡೆ ಇರಲಿಲ್ಲ. ಆವೃತ್ತಿ ಪೂರ ಅತ್ಯಧಿಕ ರನ್ ಗಳಿಸಿದ ಮೇರೆಗೆ ವಿರಾಟ್ ಆರೆಂಜ್ ಕ್ಯಾಪ್ಗೆ ಭಾಜನರಾದರು. ಇದೀಗ ಈ ಮೂವರು ಫಾಸ್ಟ್ ಬೌಲರ್ಗಳು ಪರ್ಪಲ್ ಕ್ಯಾಪ್ ಅನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಇತರೆ ತಂಡದ ಬೌಲರ್ಗಳ ಜತೆ ಉತ್ತಮ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಯಿದೆ,(ಏಜೆನ್ಸೀಸ್).