1 ಎಸೆತದಲ್ಲಿ 22 ರನ್​... ಸ್ಫೋಟಕ ಬ್ಯಾಟಿಂಗ್​ನಿಂದ ಅಬ್ಬರಿಸಿ ಬೊಬ್ಬಿರಿದ RCB ಸ್ಟಾರ್ ರೊಮಾರಿಯೊ ಶೆಫರ್ಡ್! CPL 2025 ​

CPL 2025 ​
Published on

CPL 2025 : ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ರೊಮಾರಿಯೊ ಶೆಫರ್ಡ್ ಕೆರಿಬಿಯನ್ ಪ್ರೀಮಿಯರ್ ಲೀಗ್ 2025 (ಸಿಪಿಎಲ್ 2025) ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದಾರೆ. ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವ ಶೆಫರ್ಡ್, ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಕೇವಲ ಒಂದು ಎಸೆತದಲ್ಲಿ 22 ರನ್‌ಗಳು ದಾಖಲಾಗಿರುವುದು ಗಮನಾರ್ಹ.

ಸೇಂಟ್ ಲೂಯಿಸ್ ಬೌಲರ್ ಓಶೇನ್ ಥಾಮಸ್ ಅವರು ಇನ್ನಿಂಗ್ಸ್‌ನ 15ನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಮೂರನೇ ಎಸೆತವನ್ನು ಶೆಫರ್ಡ್ ಆಡಿದರು. ಆದರೆ, ಯಾವುದೇ ರನ್ ಗಳಿಸಲಿಲ್ಲ. ಆದಾಗ್ಯೂ, ಅದು ನೋ ಬಾಲ್ ಆಗಿತ್ತು. ನಂತರದ ಎಸೆತವನ್ನು ಧಾಮಸ್​ ವೈಡ್​ ಮಾಡಿದರು. ಇದಾದ ಬಳಿಕ ಮತ್ತೆ ಚೆಂಡನ್ನು ಬೌಲ್ ಮಾಡಿದಾಗ, ಶೆಫರ್ಡ್ ಅದನ್ನು ಸಿಕ್ಸರ್‌ ಬಾರಿಸಿದರು. ಇಲ್ಲಿ, ಥಾಮಸ್‌ನ ದುರಾದೃಷ್ಟವೆಂದರೆ ಅದು ಕೂಡ ನೋ ಬಾಲ್ ಆಗಿತ್ತು. ಅವರು ಮತ್ತೆ ಚೆಂಡನ್ನು ಬೌಲ್ ಮಾಡಿದಾಗ, ಶೆಫರ್ಡ್ ಈ ಬಾರಿಯೂ ಭರ್ಜರಿ ಸಿಕ್ಸರ್ ಸಿಡಿಸಿದರು. ಆದರೆ, ಅದು ಕೂಡ ನೋ ಬಾಲ್ ಆಗಿತ್ತು ಎಂಬುದು ಗಮನಾರ್ಹ. ಅದರ ನಂತರದ ಎಸೆತವನ್ನೂ ಶೆಫರ್ಡ್ ಸಿಕ್ಸರ್​ ಬಾರಿಸಿದರು. ಹೀಗಾಗಿ, ಥಾಮಸ್ ಅವರು ನಿಯಮಕ್ಕೆ ವಿರುದ್ಧವಾದ ಚೆಂಡನ್ನು ಎಸೆದ ಕಾರಣ ಕಾನೂನುಬದ್ಧ ಎಸೆತಕ್ಕೆ ಐದು ಬಾರಿ ಬೌಲ್ ಮಾಡಬೇಕಾಯಿತು. ಇದರಿಂದ ಒಟ್ಟು 22 ರನ್‌ಗಳು (N Wd N6 N6 6) ನೀಡಿದರು. ಇಫ್ತಿಕರ್ ಅಹ್ಮದ್ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಹೊಡೆದರು. ಅಲ್ಲಿಗೆ ಥಾಮಸ್ ಆ ಓವರ್‌ನಲ್ಲಿ ಒಟ್ಟು 33 ರನ್‌ಗಳನ್ನು ನೀಡಿದರು.

ಪಂದ್ಯದ ಬಗ್ಗೆ ಹೇಳುವುದಾದರೆ, ರೊಮಾರಿಯೊ ಶೆಫರ್ಡ್ (ಔಟಾಗದೆ 73 ರನ್​, 34 ಎಸೆತ, 5 ಬೌಂಡರಿ, 7 ಸಿಕ್ಸರ್) ಭರ್ಜರಿ ಆಟದಿಂದಾಗಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 202 ರನ್ ಕಲೆಹಾಕಿತು. ಶೆಫರ್ಡ್ ಹೊರತುಪಡಿಸಿ, ಇಫ್ತಿಕರ್ ಅಹ್ಮದ್ (27 ಎಸೆತಗಳಲ್ಲಿ 33 ರನ್​) ಮತ್ತು ಬೆನ್ ಮೆಕ್‌ಡರ್ಮೊಟ್ (18 ಎಸೆತಗಳಲ್ಲಿ 30 ರನ್​) ಗಯಾನಾ ಪರ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದರು. ಸೇಂಟ್ ಲೂಸಿಯಾ ಕಿಂಗ್ಸ್ ಪರ ಗ್ಯಾಸ್ಟನ್ ಎರಡು ವಿಕೆಟ್ ಪಡೆದರು. ಪಿಯರೆ, ಡೇವಿಡ್ ವೈಸ್ ಮತ್ತು ಒಶೇನ್ ಥಾಮಸ್ ತಲಾ ಒಂದು ವಿಕೆಟ್ ಪಡೆದರು.

ನಂತರ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 18.1 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು 11 ಎಸೆತಗಳು ಬಾಕಿ ಇರುವಾಗಲೇ 203 ರನ್‌ಗಳ ಗುರಿಯನ್ನು ತಲುಪಿತು. ಸೇಂಟ್ ಲೂಸಿಯಾ ತಂಡದ ಬ್ಯಾಟ್ಸ್‌ಮನ್‌ಗಳಾದ ಅಖಿಮ್ ಅಗಸ್ಟಿ (73 ರನ್​, 35 ಎಸೆತ, 6 ಬೌಂಡರಿ, 4 ಸಿಕ್ಸರ್) ಅದ್ಭುತ ಪ್ರದರ್ಶನ ನೀಡಿದರು. ಟಿಮ್ ಸೀಫರ್ಟ್ (24 ಎಸೆತಗಳಲ್ಲಿ 37 ರನ್) ಮತ್ತು ಟಿಮ್ ಡೇವಿಡ್ (15 ಎಸೆತಗಳಲ್ಲಿ 25 ರನ್) ಉತ್ತಮವಾಗಿ ಬ್ಯಾಟ್​ ಬೀಸಿದರು. ಗಯಾನ ಪರ ಗುಡಕೇಶ್ ಮೋತಿ ಮತ್ತು ಜೆಡ್ಡಿಯಾ ಬ್ಲೇಡ್ಸ್ ತಲಾ ಎರಡು ವಿಕೆಟ್ ಪಡೆದರು.

ಆರ್​ಸಿಬಿ ಹುಲಿ ಶೆಫರ್ಡ್​

ರೊಮಾರಿಯೊ ಶೆಫರ್ಡ್ ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರವಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 14 ಎಸೆತಗಳಲ್ಲಿ 53 ರನ್‌ಗಳ ಜೊತೆಗೆ ಎರಡನೇ ಅತಿ ವೇಗದ ಅರ್ಧಶತಕವನ್ನು (50 ರನ್) ಗಳಿಸಿದ ದಾಖಲೆ ಬರೆದಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್‌ನಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳು ಸೇರಿದ್ದವು, ಇದರಲ್ಲಿ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್‌ಗೆ 33 ರನ್‌ಗಳನ್ನು ಮತ್ತು ಕೊನೆಯ ಓವರ್‌ನಲ್ಲಿ ಮತೀಶ ಪತಿರಾಣಗೆ 21 ರನ್‌ಗಳನ್ನು ಬಾರಿಸಿದರು. ಈ ಪ್ರದರ್ಶನ ಆರ್‌ಸಿಬಿಯನ್ನು 213/5 ರನ್‌ಗಳಿಗೆ ಕೊಂಡೊಯ್ದಿತು ಮತ್ತು ಸಿಎಸ್‌ಕೆ ವಿರುದ್ಧ 2 ರನ್‌ಗಳ ರೋಚಕ ಗೆಲುವಿಗೆ ಕಾರಣವಾಯಿತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಅರ್ಧಶತಕವಾಗಿದ್ದು, ಆರ್‌ಸಿಬಿಯ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕವಾಗಿದೆ. ಹೀಗಾಗಿ ಶೆಫರ್ಡ್​ ಅವರನ್ನು ಆರ್​ಸಿಬಿ ಹುಲಿ ಎಂದೇ ಕರೆಯುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net