ಕೈಬಿಟ್ಟ ಪಾಲಕರು, ಪತಿಯ ಚಿತ್ರಹಿಂಸೆ.. 50 ಪೈಸೆಗೆ ಟೀ ಮಾರ್ತಿದ್ದ ಮಹಿಳೆ ಶತ ಕೋಟಿ ಸಾಮ್ರಾಜ್ಯ ಕಟ್ಟಿದ ಯಶೋಗಾಥೆ! Success Story

Success Story
Published on

Success Story : ಯಶಸ್ಸು ಅನ್ನೋದು ರಾತ್ರೋರಾತ್ರಿ ಬರುವಂಥದ್ದಲ್ಲ, ಅದರ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಅನೇಕ ಕಷ್ಟಗಳನ್ನು ದಾಟ ಬೇಕಾಗುತ್ತದೆ. ನಿದ್ದೆಯಿಲ್ಲದ ರಾತ್ರಿಗಳು, ಖಾಲಿ ಹೊಟ್ಟೆಯಲ್ಲಿ ನಡೆದ ಹಾದಿಗಳು ಹಾಗೂ ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ಈ ಜಗತ್ತು ನಮ್ಮನ್ನು ಗುರುತಿಸುವುದೇ ಇಲ್ಲ. ಯಾವಾಗ ಯಶಸ್ಸು ನಿಮ್ಮದಾಗುತ್ತೋ ಆಗ ನಿಮ್ಮ ಬಗ್ಗೆ ಎಲ್ಲರು ಮಾತನಾಡುತ್ತಾರೆ ಮತ್ತು ನಿಮ್ಮ ಬೆನ್ನು ತಟ್ಟುತ್ತಾರೆ. ಅಂಥದ್ದೇ ಯಶೋಗಾಥೆಯನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ನಾವಿನಿಂದ ಹೇಳ ಹೊರಟಿರುವ ಯಶಸ್ವಿ ಮಹಿಳೆಯ ಹೆಸರು ಪೆಟ್ರೀಷಿಯಾ ನಾರಾಯಣ್. ಇವರು ತಮಿಳುನಾಡಿನ ನಾಗರಕೋಯಿಲ್ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ-ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು. ಪೆಟ್ರೀಷಿಯಾ ಅವರು ಕಾಲೇಜಿನಲ್ಲಿದ್ದಾಗಲೇ ನಾರಾಯಣ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆತನನ್ನೇ ಮದುವೆಯಾಗಬೇಕೆಂದು ಪಾಲಕರನ್ನು ಒತ್ತಾಯಿಸಿದರು. ಆದರೆ, ಅವರ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಅದಕ್ಕೆ ಕಾರಣ ನಾರಾಯಣ್ ಅನ್ಯ ಧರ್ಮೀಯ.

ಪಾಲಕರ ವಿರೋಧದ ನಡುವೆಯೂ ಪೆಟ್ರೀಷಿಯಾ ಅವರು 17ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ನಾರಾಯಣ್​ರನ್ನು ಮದುವೆಯಾದರು. ಇದರಿಂದಾಗಿ ಅವರ ಕುಟುಂಬ, ಪೆಟ್ರೀಷಿಯಾ ಅವರನ್ನು ಶಾಶ್ವತವಾಗಿ ದೂರವಿಡಲು ನಿರ್ಧರಿಸಿದರು. ಇತ್ತ ಕುಟುಂಬದ ವಿರೋಧದ ನಡುವೆಯು ಮದುವೆಯಾದರೂ ಆಕೆ ಸಂತೋಷವಾಗಿರಲಿಲ್ಲ. ಏಕೆಂದರೆ, ಮದುವೆಯಾದ ಬಳಿಕ ಆಕೆಯ ಪತಿ ನಾರಾಯಣ್​ ತನ್ನ ಅಸಲಿ ಮುಖವನ್ನು ತೋರಿಸಿದನು. ಆತ ಮಾದಕ ವ್ಯಸನಿಯಾಗಿದ್ದ. ಪೆಟ್ರೀಷಿಯಾ ಅವರ ಮೇಲೆ ನಿತ್ಯವೂ ಹಲ್ಲೆ ಮಾಡುತ್ತಿದ್ದ. ಅಲ್ಲಿಗೆ, ಪೆಟ್ರೀಷಿಯಾರ ಪ್ರೇಮಕಥೆ ದುರಂತ ಕತೆಯಾಯಿತು.

ಗಂಡನ ಅಷ್ಟೊಂದು ಹಲ್ಲೆ ಮಾಡಿದರು ಕೂಡ ಪೆಟ್ರೀಷಿಯಾ ಸಹಿಸಿಕೊಂಡಿದ್ದರು. ಏಕೆಂದರೆ, ಅವರಿಗೆ ಅಷ್ಟರಲ್ಲಾಗಲೇ ಇಬ್ಬರು ಮಕ್ಕಳಿದ್ದರು. ಪೆಟ್ರೀಷಿಯಾಳ ಪತಿ ಭಾರಿ ವ್ಯಸನಿಯಾದರು ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಇಂತಹ ಸಂದರ್ಭದಲ್ಲಿ ತನ್ನ ಕುಟುಂಬವನ್ನು ಪೋಷಿಸಲು ಪೆಟ್ರೀಷಿಯಾ ಅವರು ಕಾಫಿ ಮತ್ತು ಟೀ ಮಾರಾಟ ಮಾಡಲು ನಿರ್ಧರಿಸಿದರು. ಈ ಒಂದು ನಿರ್ಧಾರ ಅವರ ಜೀವನವನ್ನೇ ಬದಲಾಯಿಸಿತು. ಆಕೆಯ ಜೀವನ ಹೇಗೆ ಬದಲಾಯಿತು ಅಂದರೆ, ಆಕೆ ನೂರು ಕೋಟಿಗಳ ಒಡತಿಯಾದಳು.

ಪೆಟ್ರೀಷಿಯಾ ಚೆನ್ನೈನ ಮರೀನಾ ಬೀಚ್‌ನಲ್ಲಿ ಒಂದು ಟೀ ಸ್ಟಾಲ್ ಅನ್ನು ಪ್ರಾರಂಭಿಸಿದರು. ಆರಂಭದಲ್ಲಿ, ಕೇವಲ 50 ಪೈಸೆಗೆ ಒಂದು ಕಪ್ ಕಾಫಿಯನ್ನು ಮಾರಾಟ ಮಾಡುವ ಮೂಲಕ ಬಹಳಷ್ಟು ಕಷ್ಟಪಟ್ಟರು. ನಂತರ, ಅವರು ತಮ್ಮ ಆದಾಯಕ್ಕೆ ಪೂರಕವಾಗಿ ಸಮೋಸಾ ಸೇರಿದಂತೆ ಕೆಲವು ತಿಂಡಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಅವರು ಪ್ರತಿದಿನ 50 ರೂ.ಗಳನ್ನು ಸಂಪಾದಿಸುತ್ತಿದ್ದರು.

ಕ್ರಮೇಣ, ಪೆಟ್ರೀಷಿಯಾ ಅವರು ಅಡುಗೆ ವ್ಯವಹಾರದಲ್ಲಿ ಉದ್ಯೋಗಗಳನ್ನು ಹುಡುಕಲು ಪ್ರಾರಂಭಿಸಿದರು. ಅವರು ಸರ್ಕಾರಿ ಮತ್ತು ಬ್ಯಾಂಕಿಂಗ್ ಕಾರ್ಯಕ್ರಮಗಳಿಗೆ ಅಡುಗೆ ಸೇವೆಯನ್ನು ಪ್ರಾರಂಭಿಸಿದರು. ಒಂದು ಸಮಾರಂಭದಲ್ಲಿ ಸುಮಾರು 2000 ಜನರಿಗೆ ಆಹಾರವನ್ನು ತಯಾರಿಸುತ್ತಿದ್ದರು. ಶೀಘ್ರದಲ್ಲೇ ಅವರ ವ್ಯವಹಾರವು ಭಾರಿ ವಿಸ್ತರಣೆಯಾಯಿತು.

ತಮ್ಮ ಉದ್ಯಮ ಬೆಳೆದ ಒಂದು ವರ್ಷದ ಬಳಿಕ ಪತಿ ನಾರಾಯಣ್​ ನಿಧನರಾದರು. ಸಾಮಾನ್ಯವಾಗಿ ಗಂಡ ಸತ್ತಾಗ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ. ತಮ್ಮ ಜೀವನವೇ ಖಾಲಿ ಎಂದು ಅವರು ಭಾವಿಸುತ್ತಾರೆ. ಆದರೆ, ಪೆಟ್ರೀಷಿಯಾ ಎಲ್ಲಿಯೂ ಕುಗ್ಗಲಿಲ್ಲ ಮತ್ತು ತಮ್ಮ ಕನಸನ್ನು ಬಿಟ್ಟುಕೊಡಲಿಲ್ಲ. ತಮ್ಮ ಉದ್ಯಮದಲ್ಲಿ ಅವರು ಸಾಗುತ್ತಲೇ ಇದ್ದರು. ಆದರೆ, ಆ ಅಗ್ನಿಪರೀಕ್ಷೆ ಅಲ್ಲಿಗೆ ಮುಗಿಯಲಿಲ್ಲ. ತನ್ನ ಮಗಳು ಮತ್ತು ಅಳಿಯನನ್ನು ಅಪಘಾತದಲ್ಲಿ ಕಳೆದುಕೊಂಡರು. ಈ ನೋವನ್ನು ಮರೆಯಲು, ಪೆಟ್ರೀಷಿಯಾ ಅವರು ತನ್ನ ಮಗನೊಂದಿಗೆ ಸೇರಿ ತನ್ನ ಮಗಳ ಹೆಸರಿನಲ್ಲಿ ಸಂದಿಫಾ ಹೋಟೆಲ್‌ಗಳನ್ನು ತೆರೆಯಲು ನಿರ್ಧರಿಸಿದರು.

ಇದೇ ರೀತಿ ಪೆಟ್ರೀಷಿಯಾ ನಾರಾಯಣ್ ಅವರ ರೆಸ್ಟೋರೆಂಟ್‌ಗಳ ಸರಪಳಿ ತಮಿಳುನಾಡಿನಾದ್ಯಂತ ಹರಡಿತು. ನೋಡ ನೋಡುತ್ತಿದ್ದಂತೆ ಪೆಟ್ರೀಷಿಯಾ ಅವರು ಕೋಟ್ಯಾಧಿಪತಿಯಾದರು. ಈಗ ಸಂದಿಫಾ ರೆಸ್ಟೋರೆಂಟ್‌ಗಳು ದಿನಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ತರುತ್ತವೆ. ಪೆಟ್ರೀಷಿಯಾ ನಾರಾಯಣ್ ಅವರ ಒಟ್ಟು ನಿವ್ವಳ ಮೌಲ್ಯ 100 ಕೋಟಿ ರೂ. ಅಧಿಕ ಇದೆ. ಎಲ್ಲಿಯ 50 ಪೈಸೆ ಮತ್ತು ಎಲ್ಲಿಯ ನೂರು ಕೋಟಿ... ಪೆಟ್ರೀಷಿಯಾ ತನ್ನ ಜೀವನದುದ್ದಕ್ಕೂ ಅನೇಕ ಕಷ್ಟಗಳನ್ನು ಎದುರಿಸಿದರು. ಗಂಡ ಮತ್ತು ಮಗಳನ್ನು ಕಳೆದುಕೊಂಡರು. ಅಲ್ಲದೆ, ತನ್ನ ಹೆತ್ತವರನ್ನು ಸಹ ಕಳೆದುಕೊಂಡಳು. ಓರ್ವ ಯಶಸ್ವಿ ಮಹಿಳೆಯ ಹಿಂದೆ ಇಷ್ಟೊಂದು ದುರಂತವಿದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ, ಇಂದು ಪೆಟ್ರೀಷಿಯಾ ಅವರು ಎಲ್ಲರಿಗು ಮಾದರಿಯಾಗಿ ನಿಂತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net