ಕ್ರಿಕೆಟಿಗರಿಗೆ ಬಿಸಿಸಿಐನಿಂದ 100 ಪುಟಗಳ ಮಾರ್ಗಸೂಚಿ

cricket
Published on

ನವದೆಹಲಿ: ಐಪಿಎಲ್‌ಗೆ ವೇದಿಕೆ ಸಜ್ಜುಗೊಳಿಸಿದ ಬೆನ್ನಲ್ಲೇ ಕ್ರಿಕೆಟ್ ತರಬೇತಿ ಪುನರಾರಂಭಕ್ಕೂ ಬಿಸಿಸಿಐ 100 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಕಳುಹಿಸಿರುವ ತನ್ನ ಗುಣಮಟ್ಟದ ಕಾರ್ಯವಿಧಾನದಲ್ಲಿ (ಎಸ್‌ಒಪಿ) 60 ವರ್ಷ ಮೇಲ್ಪಟ್ಟ ಎಲ್ಲ ಕೋಚ್, ಗ್ರೌಂಡ್‌ಮನ್, ಅಧಿಕಾರಿ ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ತರಬೇತಿ ಶಿಬಿರಗಳಿಂದ ನಿರ್ಬಂಧ ಹೇರಲಾಗಿದೆ.

‘ಆಟಗಾರರು, ಸಿಬ್ಬಂದಿ ಮತ್ತು ಇತರ ಎಲ್ಲರ ಆರೋಗ್ಯ ಮತ್ತು ಸುರಕ್ಷತೆಯು ಸಂಪೂರ್ಣವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ’ ಎಂದು ಬಿಸಿಸಿಐ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. 2019-20ರ ದೇಶೀಯ ಕ್ರಿಕೆಟ್ ಋತು ಕಳೆದ ಮಾರ್ಚ್ ನಲ್ಲಿ ಅಕಾಲಿಕವಾಗಿ ಅಂತ್ಯಗೊಂಡಿದ್ದರೆ, ಮುಂದಿನ ಋತು ಸಾಮಾನ್ಯ ಸಂಪ್ರದಾಯದ ಪ್ರಕಾರ ಈ ತಿಂಗಳು ಆರಂಭವಾಗಬೇಕಾಗಿತ್ತು. ಆದರೆ ಹಾಲಿ ಕರೊನಾ ಹಾವಳಿಯಿಂದಾಗಿ ವಿಳಂಬವಾಗಿದೆ.

ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳು

ಕ್ರೀಡಾಂಗಣಕ್ಕೆ ತೆರಳುವುದರಿಂದ ಅಭ್ಯಾಸದವರೆಗೆ ಕ್ರಿಕೆಟಿಗರು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸ ಬೇಕಾಗಿದೆ. ಕರೊನಾ ಹಾವಳಿಯ ನಡುವೆ ಅಭ್ಯಾಸ ಪುನರಾರಂಭಿಸುವ ಅಪಾಯದ ಜವಾಬ್ದಾರಿಯನ್ನು ನಾವೇ ಹೊತ್ತು ಕೊಳ್ಳುವುದಾಗಿ ಆಟಗಾರರು ಮೊದಲಿಗೆ ಾರ್ಮ್ ಒಂದಕ್ಕೆ ಸಹಿ ಹಾಕಿ ನೀಡಬೇಕಾಗಿದೆ. ಕ್ರಿಕೆಟಿಗರು ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ಈಗಾಗಲೆ ನಿಷೇಧಿಸಿದೆ.

2 ಬಾರಿ ನೆಗೆಟಿವ್ ಬರಬೇಕು

ಕ್ರಿಕೆಟಿಗರ ತರಬೇತಿ ಶಿಬಿರ ಆರಂಭಕ್ಕೆ ಮುನ್ನ ಪ್ರತಿ ಆಟಗಾರ ಮತ್ತು ಸಿಬ್ಬಂದಿ ಕೊನೆಯ 2 ವಾರಗಳ ಪ್ರಯಾಣ ಮತ್ತು ವೈದ್ಯಕೀಯ ಇತಿಹಾಸವನ್ನು ಆನ್‌ಲೈನ್ ಪ್ರಶ್ನಾವಳಿಯ ಮೂಲಕ ವೈದ್ಯಕೀಯ ತಂಡಕ್ಕೆ ತಿಳಿಸಬೇಕಾಗಿದೆ. ಕೋವಿಡ್-19 ಲಕ್ಷಣ ಕಾಣಿಸುವವರನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 3 ದಿನಗಳ ಅಂತರದಲ್ಲಿ ನಡೆಯುವ ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದರಷ್ಟೇ ಶಿಬಿರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.

ಎನ್95 ಮಾಸ್ಕ್ ಕಡ್ಡಾಯ

ಕ್ರೀಡಾಂಗಣಕ್ಕೆ ಆಗಮಿಸುವ ವೇಳೆ ಆಟಗಾರರು ಎನ್95 ಮಾಸ್ಕ್ (ಉಸಿರಾಟದ ರಂಧ್ರ ಇಲ್ಲದಿರುವುದು) ಧರಿಸುವುದು ಕಡ್ಡಾಯ. ಬಳಿಕ ತರಬೇತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಅದನ್ನು ಹಾಕಿರಬೇಕು. ಆಟಗಾರರು ಕ್ರೀಡಾಂಗಣಕ್ಕೆ ಆಗಮಿಸಲು ಸಾರ್ವಜನಿಕ ಸಾರಿಗೆಗಿಂತ ತಮ್ಮ ಸ್ವಂತ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಉತ್ತಮ ಎಂದೂ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net