More

    ಕ್ರೀಡಾ ಶಾಲೆ ಕನಸಿಗೆ ಮರುಜೀವ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಜಿಲ್ಲೆಯ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಚೇತನ ಟಿ.ಶಂಕರನಾರಾಯಣ ಭಟ್ ಸರ್ಕಾರಕ್ಕೆ ಸಲ್ಲಿಸಿದ ಮನವಿ ಜಿಲ್ಲೆಯಲ್ಲಿ ಸದ್ದು ಮಾಡತೊಡಗಿದೆ. ಜಿಲ್ಲೆಗೆ ಈವರೆಗೂ ಕ್ರೀಡಾ ಶಾಲೆ ಮಂಜೂರಾಗಿ ಲಭಿಸದಿರುವುದನ್ನು ಮನಗಂಡು ಟಿ.ಶಂಕರನರಾಯಣ ಭಟ್ ಅವರು ಪೈವಳಿಕೆಯಲ್ಲಿ ಮುಖ್ಯಮಂತ್ರಿ ಹಾಗೂ 19 ಮಂದಿ ಸಚಿವರು ಪಾಲ್ಗೊಂಡಿದ್ದ ನವಕೇರಳ ಸಮಾವೇಶದಲ್ಲಿ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸಿದೆ.

    ಜಿಲ್ಲೆಯ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸುಮಾರು 13 ಎಕರೆ ಜಾಗವಿದ್ದು, ಇದು ಸ್ಪೋರ್ಟ್ಸ್ ಸ್ಕೂಲ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದರು. ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಶಾಲೆಯಿಲ್ಲದಿರುವುದರಿಂದ ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ಸೇನೆ ಸೇರಿದಂತೆ ವಿವಿಧ ವಲಯದಲ್ಲಿ ಉದ್ಯೋಗದಿಂದ ವಂಚಿತರಾಗಬೇಕಾಗುತ್ತಿದ್ದಾರೆ. ಕ್ರೀಡಾಶಾಲೆ ಆರಂಭಗೊಂಡಲ್ಲಿ ಇವೆಲ್ಲಕ್ಕೂ ಪರಿಹಾರ ಲಭಿಸಲಿದೆ ಎಂದೂ ಮನವಿಯಲ್ಲಿ ತಿಳಿಸಿದ್ದರು.

    ಟಿ.ಶಂಕರನಾರಾಯಣ ಭಟ್ ಸಲ್ಲಿಸಿದ ಮನವಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣವನ್ನೂ ಕೇಳಿದೆ. ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯನ್ನು ಕ್ರೀಡಾ ಶಾಲೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಲ್ಲೂ ವರದಿ ಕೇಳಿದೆ.

    ಏಕಾಂಗಿ ಸಾಹಸ

    ಕರ್ನಾಟಕ ಗಮಕ ಕಲಾ ಪರಿಷತ್ ಕೇರಳ ಘಟಕ ಅಧ್ಯಕ್ಷರೂ ಆಗಿರುವ ಟಿ.ಶಂಕರನಾರಾಯಣ ಭಟ್ ಹಲವಾರು ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ವಯಸ್ಸನ್ನೂ ಲೆಕ್ಕಿಸದೆ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಕಾರಡ್ಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಆರಂಭಕ್ಕೂ ಶ್ರಮಿಸಿದ್ದರು. ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯಾಗಿ ಬಡ್ತಿಗೊಳಿಸುವಲ್ಲೂ ಶ್ರಮಿಸಿದ್ದಾರೆ. 7 ಎಕರೆ ಇದ್ದ ಶಾಲೆಯ ಭೂಮಿಯನ್ನು 13 ಎಕರೆವರೆಗೆ ವಿಸ್ತರಿಸುವಲ್ಲೂ ಅವರ ಶ್ರಮವಿದೆ. ಪ್ರಸಕ್ತ ಸ್ಪೋರ್ಟ್ಸ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

    ಜಿಲ್ಲೆಯ ಸಮಸ್ತ ಕನ್ನಡಿಗರ ಹಿತದೃಷ್ಟಿಯಿಂದ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡದ ಪ್ರತಿ ವಿಷಯಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ಅದಕ್ಕೆ ಉತ್ತರ ಪಡೆಯುವುದನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದೇನೆ. ನವಕೇರಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗೆ ಜಿಲ್ಲೆಯಲ್ಲಿ ಕ್ರೀಡಾ ಶಾಲೆ ಆರಂಭಿಸುವಂತೆ ಮಾಡಿಕೊಂಡ ಮನವಿಗೆ ಸರ್ಕಾರ ಕೈಗೊಂಡಿರುವ ಸಕಾರಾತ್ಮಕ ನಿಲುವು ಹರ್ಷ ತಂದಿದೆ.
    -ಟಿ.ಶಂಕರನಾರಾಯಣ ಭಟ್, ಅಧ್ಯಕ್ಷ
    ಗಮಕ ಕಲಾ ಪರಿಷತ್ ಕೇರಳ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts