-ಸಂದೀಪ್ ಸಾಲ್ಯಾನ್ ಬಂಟ್ವಾಳ
ವಿದ್ಯಾಭ್ಯಾಸದ ಬಳಿಕ ತಾನು ಈ ಉದ್ಯೋಗ ಪಡೆಯಬೇಕು, ಇಂತಹ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು, ಸ್ವಉದ್ಯೋಗ ಮಾಡಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲೂ ಇರುತ್ತದೆ. ಆದರೆ ಇಲ್ಲೊಬ್ಬರು ಮಹಿಳೆ ತಾನು ಆಟೋ ಚಾಲಕಿಯಾಗಬೇಕು ಎಂದು ಬಯಸಿ, ಚಾಲನೆ ತರಬೇತಿ ಪಡೆದು, ಆಟೋ ಖರೀದಿಸಿ ಇಂದು ಯಶಸ್ವಿ ಆಟೋ ಚಾಲಕಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಅಗ್ರಾರ್ ಬಳಿಯ ಮಡ್ಯಾರ್ ನಿವಾಸಿ ವನಿತಾ ಕುಲಾಲ್ ಈ ಸಾಧನೆ ಮಾಡಿದವರು. ಗಂಡು ದಿಕ್ಕಿಲ್ಲದೆ, ಬಡತನದಿಂದ ನಲುಗಿದ್ದ ತನ್ನ ಕುಟುಂಬಕ್ಕೆ ಆರ್ಥಿಕ ಚೈತನ್ಯ ತುಂಬಲು ವನಿತಾ ಆಟೋ ಚಾಲಕಿಯಾಗಿ ಪುರುಷ ಕೇಂದ್ರಿತವಾಗಿರುವ ಕ್ಷೇತ್ರದಲ್ಲಿ ಶ್ರಮಿಸಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಬಂಟ್ವಾಳದ ಅಗ್ರಾರ್ ಬಳಿಯ ಮಡ್ಯಾರಿನ ತಿಮ್ಮಪ್ಪ ಮೂಲ್ಯ ಹಾಗೂ ವೀರಮ್ಮ ಕುಟುಂಬದ ನಾಲ್ಕು ಮಕ್ಕಳ ಪೈಕಿ ವನಿತಾ ಕೊನೆಯವರು. ಕುಟುಂಬಕ್ಕೆ ಆಧಾರವಾಗಬೇಕಿದ್ದ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿಯೇ ದ್ವಿತೀಯ ಪಿಯುಸಿಯವರೆಗೆ ವಿದ್ಯಾಭ್ಯಾಸ ಪಡೆದು ಬಡತನದಿಂದ ಮತ್ತೆ ಶಿಕ್ಷಣ ಮುಂದುವರೆಸಲಾಗದೆ ಕೆಲ ವರ್ಷ ಬಂಟ್ವಾಳದ ಜವಳಿ ಅಂಗಡಿಯಲ್ಲಿ ಕೆಲಸ ಮಾಡಿದರು. ತೀವ್ರ ಅನಾರೋಗ್ಯದಿಂದ ತಾಯಿಯೂ ಇಹಲೋಕ ತ್ಯಜಿಸಿದಾಗ ಮನೆ ನಿಭಾಯಿಸುವ ಜವಾಬ್ದಾರಿ ವನಿತಾ ಅವರ ಹೆಗಲಿಗೆ ಬಿತ್ತು.
ಆಟೋ ಚಾಲನೆ ತರಬೇತಿ
ತಾನು ಆಟೋ ಚಾಲಕಿಯಾಗಬೇಕೆನ್ನುವ ಹಂಬಲ ವ್ಯಕ್ತಪಡಿಸಿದ ವನಿತಾ ಅವರಿಗೆ ಪದವಿನಂಗಡಿಯ ಅಶೋಕ್ ಎಂಬುವರು ಆಟೋ ಚಾಲನೆ ತರಬೇತಿ ನೀಡಿದರು. ಶ್ರದ್ಧೆಯಿಂದ ತರಬೇತಿ ಪಡೆದು ಲೈಸೆನ್ಸ್ ಮಾಡಿಸಿಕೊಂಡರು. ಸಾಲ ಮಾಡಿ ಆಟೋ ಖರೀದಿಸಿ ವೃತ್ತಿ ಆರಂಭಿಸಿಯೇ ಬಿಟ್ಟರು. ಆರಂಭದಲ್ಲಿ ಸ್ವಲ್ಪ ಎಡರು ತೊಡರು ಅನುಭವಿಸಿದರೂ ಸ್ಥಳೀಯ ಆಟೋ ಚಾಲಕರು ಸೇರಿದಂತೆ ಮನೆಮಂದಿಯ ಪ್ರೋತ್ಸಾಹದಿಂದ ಯಶಸ್ಸು ಕಂಡುಕೊಂಡು ಬಂಟ್ವಾಳದ ಮೊದಲ ಮಹಿಳಾ ಆಟೋ ಚಾಲಕಿಯೆನಿಸಿಕೊಂಡರು. ಕಳೆದ 4 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಅನಿವಾರ್ಯ ಬಾಡಿಗೆಗಳಿದ್ದಾಗ ಮಧ್ಯರಾತ್ರಿಯಲ್ಲೂ ಸೇವೆ ನೀಡುವ ಇವರು ಬಡವರು, ವೃದ್ಧರು, ರೋಗಿಗಳಿಗೆ ಉಚಿತ ಸೇವೆ ನೀಡುತ್ತಾರೆ. ಪತಿ ಯೋಗೀಶ್ ಸಹಕಾರದಿಂದಾಗಿ ಪ್ರಸ್ತುತ ಒಂಬತ್ತು ತಿಂಗಳ ಮಗು ಇದ್ದರೂ, ತನ್ನ ವೃತ್ತಿ ಧರ್ಮ ಪಾಲಿಸುವ ಅವರು ಯಾವ ಕ್ಷಣದಲ್ಲೂ, ಎಷ್ಟು ದೂರ ಬಾಡಿಗೆಗೆ ಕರೆ ಬಂದರೂ ಆಟೋದೊಂದಿಗೆ ಗ್ರಾಹಕರ ಮುಂದೆ ಪ್ರತ್ಯಕ್ಷರಾಗುತ್ತಾರೆ.
ಅಮ್ಮನಿಗೆ ಮನೆಯ ಜವಾಬ್ದಾರಿಯಲ್ಲಿ ನೆರವಾಗಬೇಕು ಎನ್ನುವ ಉದ್ದೇಶದಿಂದ ಆಟೋ ಚಾಲಕಿಯಾದೆ. ಎಲ್ಲರ ಸಹಕಾರದಿಂದ ಇಂದು ಈ ವೃತ್ತಿಯಲ್ಲಿ ಸಂತೋಷದಿಂದ ಕೆಲಸ ನಿರ್ವಹಿಸುತ್ತಿದ್ದೇನೆ.
-ವನಿತಾ ಕುಲಾಲ್, ಮಡ್ಯಾರ್