ದೆವ್ವದಾಟಕ್ಕೆ ಹೆದರಿದ 'ದಿಯಾ' ಖುಷಿ; ಕಾಲೇಜ್​ನಲ್ಲೊಂದು ಹಾರರ್​ ಸ್ಟೋರಿ

Spooky College (2)
Published on

ಬೆಂಗಳೂರು: 'ದಿಯಾ' ನಂತರ ಆ ಚಿತ್ರದ ನಾಯಕಿ ಖುಷಿ, 'ಸ್ಪೂಕಿ ಕಾಲೇಜ್​' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿಯಾಗಿತ್ತು. ಈಗ ಆ ಚಿತ್ರ ಸದ್ದಿಲ್ಲದ್ದೆ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಭರತ್ ಜಿ ನಿರ್ದೇಶಿಸಿರುವ 'ಸ್ಪೂಕಿ ಕಾಲೇಜ್' ಚಿತ್ರದ ಟೀಸರ್ ಯೂಟ್ಯೂಬ್​ನ ಶ್ರೀದೇವಿ ಮ್ಯೂಸಿಕ್ ಚಾಲನ್​ಲ್ಲಿ ಬಿಡುಗಡೆಯಾಗಿದೆ. ಬಿ.ಜಿ.ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಪ್ರಕಾಶನಾಥಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ.

ಇದುವರೆಗೂ ಹಲವು ಹಾರರ್​ ಚಿತ್ರಗಳು ಬಿಡುಗಡೆಯಾಗಿವೆ. ಅವೆಲ್ಲವ ಒಂಟಿ ಮನೆಯಲ್ಲಿ ನಡೆಯುವಂತಹ ಕಥೆಗಳಾಗಿದ್ದವು. ಆದರೆ, ಇದೇ ಮೊದಲ ಬಾರಿಗೆ ಕಾಲೇಜ್​ನಲ್ಲಿ ದೆವ್ವ ಇದ್ದರೆ ಏನಾಗಿದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ‌ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ 'ಸ್ಪೂಕಿ ಕಾಲೇಜ್' ಬಿಡುಗಡೆಯಾಗಲಿದೆ.

ಈ ಹಿಂದೆ 'ರಂಗಿತರಂಗ', 'ಅವನೇ ಶ್ರೀಮನ್ನಾರಾಯಣ' ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ನಿರ್ದೇಶಕ ಭರತ್​ ಅವರೇ ವಹಿಸಿಕೊಂಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

ಖುಷಿಗೆ ನಾಯಕನಾಗಿ ವಿವೇಕ್​ ಸಿಂಹ ನಟಿಸಿದ್ದು, ಮಿಕ್ಕಂತೆ ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net