ಇನ್ನು ತಾಲೂಕು ಆಸ್ಪತ್ರೆಗಳಲ್ಲೂ ಸ್ಪೆಷಾಲಿಟಿ ಸೇವೆ ಲಭ್ಯ; ಹಣಕಾಸು ಇಲಾಖೆ ಸಹಮತ ಖಾಲಿ ಹುದ್ದೆ ಭರ್ತಿ ಖಚಿತ

Dinesh Gundu Rao
Published on

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಶೇ.40 ಸಿಬ್ಬಂದಿ ಭರ್ತಿ ಮಾಡಲು ಹಣಕಾಸು ಇಲಾಖೆ ಜತೆಗೆ ಚರ್ಚೆ ನಡೆಸಲಾಗುತ್ತಿದೆ. ಶುಶ್ರೂಷಕರು, ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಮುಂದಿನ ತಿಂಗಳಲ್ಲಿ ಪ್ರಕ್ರಿಯೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಎಎನ್​ಎಂಗಳ ತ್ವರಿತ ನೇಮಕಕ್ಕೆ ಚರ್ಚೆಯಾಗಿದೆ. ತಜ್ಞ ವೈದ್ಯರು ಸೇರಿ 250 ವೈದ್ಯರ ನೇಮಕಾತಿಗೆ ಒಪ್ಪಿಗೆ ದೊರೆತಿದೆ. ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ ಸದ್ಯ ಇರುವ ಬಜೆಟ್​ನಲ್ಲಿಯೇ ಅನುಮತಿ ನೀಡುವಂತೆ ಕೋರಲಾಗಿದೆ. ವೈದ್ಯರ ವೇತನವನ್ನು 1.10 ಲಕ್ಷದಿಂದ 1.40 ಲಕ್ಷ ರೂ.ವರೆಗೆ ಹಾಗೂ ಎಂಬಿಬಿಎಸ್ ವೈದ್ಯರ ವೇತನವನ್ನು 45 ರಿಂದ 60 ಸಾವಿರಕ್ಕೆ ಹೆಚ್ಚಿಸಲು ಚಿಂತಿಸಲಾಗಿದೆ. ಪ್ರತಿವರ್ಷ ವೈದ್ಯರ ಸೇವಾ ಅನುಭವ ಪರಿಗಣಿಸಿ ವೇತನ ಹೆಚ್ಚಳ ಮಾಡುವ ಯೋಜನೆಯೂ ಇದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕಿದ್ದು, ಈ ಕುರಿತು ಡಿಸೆಂಬರ್​ನಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಇರುವ ವ್ಯವಸ್ಥೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡದೆ ಉತ್ತಮ ಚಿಕಿತ್ಸೆ ಸಾಧ್ಯವಿಲ್ಲ ಎಂದರು.

ಗ್ರಾಮೀಣ ಜನರಿಗೆ ಸ್ಪೆಷಾಲಿಟಿ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಸರ್ಕಾರ ಸನ್ನದ್ಧವಾಗುತ್ತಿದೆ. ತಾಲೂಕು ಆಸ್ಪತ್ರೆಗಳನ್ನು ದೊಡ್ಡ ಮಟ್ಟದಲ್ಲಿ ಕಟ್ಟುವುದಲ್ಲ, ಬದಲಾಗಿ ತಜ್ಞ ವೈದ್ಯರ ನೇಮಕ, ಮೂಲಸೌಕರ್ಯ ಕಲ್ಪಿಸುವ ಮೂಲಕ ಗುಣಮಟ್ಟದ ಸೇವೆ ಒದಗಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸುತ್ತಿದೆ. 2025-26ನೇ ಸಾಲಿನ ಬಜೆಟ್​ನಲ್ಲಿ ಅದಕ್ಕೆ ಅವಕಾಶ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಪ್ರಸ್ತಾವನೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಗ್ರಾಮೀಣ ಜನರು ತಾಲೂಕು ಆಸ್ಪತ್ರೆಗೆ ತೆರಳಲು ಈಗ ರಸ್ತೆ, ವಾಹನ ಸೇರಿ ಎಲ್ಲ ಸವಲತ್ತುಗಳೂ ಇವೆ.

ಆಂಬುಲೆನ್ಸ್ ಸಮಸ್ಯೆಗೆ ಪರಿಹಾರ: 108 ಆಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತಿರುವ ಸಂಸ್ಥೆ ಹಾಗೂ ಸಿಬ್ಬಂದಿ ಸಮಸ್ಯೆ ಸರಿಪಡಿಸಿಕೊಂಡಿದ್ದಾರೆ. ಆಂಬುಲೆನ್ಸ್ ಸೇವೆಗಳಿಗೆ ಆಧುನಿಕತೆಗೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಸಿ ಉನ್ನತೀಕರಿಸುವ ಯೋಚನೆ ಇದೆ. ಹಾಗಾಗಿ ಟೆಂಡರ್ ಪ್ರಕ್ರಿಯೆ ವಿಳಂಬ ವಾಗಿದೆ. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಮೂರು ಬಾರಿ ಟೆಂಡರ್ ಪ್ರಕ್ರಿಯೆ ರದ್ದಾಗಿದೆ. ಇದಲ್ಲದೆ 104ಕ್ಕೂ ಟೆಂಡರ್ ಕರೆಯಲಾಗುತ್ತದೆ. ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಡಯಾಲಿಸಿಸ್ ವ್ಯವಸ್ಥೆಯಲ್ಲಿ ಬದಲಾವಣೆ: ಡಯಾಲಿಸಿಸ್ ಸೇವೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸಿಂಗಲ್ ಯೂಸರ್ ವ್ಯವಸ್ಥೆ ಜಾರಿಗೆ ತಂದ ಬಳಿಕ ಸೋಂಕು ಕಡಿಮೆಯಾಗಿದ್ದು, ನಿರ್ವಹಣೆ ಸುಲಭವಾಗಿದೆ. ರೋಗಿಗಳಿಗೂ ಚಿಕಿತ್ಸೆ ಸುಲಭವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಇಲಾಖೆಯಿಂದಲೇ ಡಯಾಲಿಸಿಸ್ ಯಂತ್ರ ಖರೀದಿಸಿ ನಿರ್ವಹಣೆಗೆ ನಿರ್ಧರಿಸಲಾಗಿದೆ. ಎಬಿಎಆರ್​ಕೆ, ಕೆಕೆಆರ್​ಡಿಬಿ ಹಾಗೂ ಇಲಾಖೆ ವತಿಯಿಂದ ಅದರ ವೆಚ್ಚ ಭರಿಸಲಾಗುವುದು. ಉಚಿತವಾಗಿ ಡಯಾಲಿಸಿಸ್ ಸೇವೆ ನೀಡುತ್ತಿರುವ ಚಾರಿಟಬಲ್​ಗಳಿಗೆ ಪ್ರತಿ ಸೇವೆಗೆ 500 ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ 19 ವೈದ್ಯ ಕಾಲೇಜುಗಳಿದ್ದು, ಅಲ್ಲಿ ಈ ಮೊದಲು 400 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಈಗ ಇಲಾಖೆಯಿಂದ ಒಂದು ಸೇವೆಗೆ -ಠಿ;1000 ನೀಡಲಿದ್ದು, ಉಚಿತ ಸೇವೆ ಒದಗಿಸಲು ಸೂಚಿಸಲಾಗಿದೆ.

ಆಯುಷ್ಮಾನ್ ಯೋಜನೆ ಹೆಸರು ಬದಲು: ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ’ಗೆ ರಾಜ್ಯ ಸರ್ಕಾರವೇ ಶೇ.75 ಚಿಕಿತ್ಸಾ ವೆಚ್ಚ ಭರಿಸಲಿದೆ. ಆದ್ದರಿಂದ ರಾಜ್ಯದ ಹೆಸರನ್ನು ಮುಂಚೂಣಿಗೆ ತರಲು ‘ಆರೋಗ್ಯ ಕರ್ನಾಟಕ - ಆಯುಷ್ಮಾನ್ ಭಾರತ’ ಎಂದು ಬದಲಾವಣೆ ಮಾಡಲಾಗುತ್ತಿದೆ ಎಂದರು.

ಅಧಿಕ ಜೀವರಕ್ಷಕ ಔಷಧಗಳ ಖರೀದಿ: ನಾನು ಮಂತ್ರಿಯಾಗಿ ಬಂದಾಗ ಸಾಕಷ್ಟು ಔಷಧ ಅಭಾವ ಇತ್ತು. ಇದೀಗ ಬಹುತೇಕ ಎಲ್ಲ ಔಷಧಗಳನ್ನು ಖರೀದಿಸುವ ಕಾರ್ಯವಾಗುತ್ತಿದೆ. ಗೋದಾಮುಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.80 ಔಷಧಗಳಿವೆ. ಕಳೆದ ವರ್ಷ 200ಕ್ಕೂ ಅಧಿಕ ಜೀವರಕ್ಷಕ ಔಷಧಗಳನ್ನು ಖರೀದಿಸಲಾಗಿತ್ತು. ಈ ಬಾರಿ ಪಟ್ಟಿಯಲ್ಲಿ 100ಕ್ಕೂ ಅಧಿಕ ಜೀವರಕ್ಷಕ ಔಷಧಗಳಿವೆ. ಇವುಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು. ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ. ಧನಂಜಯ ಉಪಸ್ಥಿತರಿದ್ದರು.

250 ತಜ್ಞ ವೈದ್ಯರ ನೇಮಕ: ವೈದ್ಯರು ಸೇರಿ ಆಸ್ಪತ್ರೆಗಳಲ್ಲಿನ ಖಾಲಿ ಹುದ್ದೆಗಳ ನೇಮಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಿಬ್ಬಂದಿ ಇಲ್ಲದೇ ಏನೇ ಸವಲತ್ತು ಕೊಟ್ಟರೂ ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ 250 ತಜ್ಞ ವೈದ್ಯರ ನೇಮಕ ಮಾಡಲು ಉದ್ದೇಶಿಸಲಾಗಿದೆ. ಇವರ ಮಾಸಿಕ ವೇತನವನ್ನು 1.10 ಲಕ್ಷ ರೂ.ಗಳಿಂದ 1.45 ಲಕ್ಷಕ್ಕೆ ಹೆಚ್ಚಿಸುವ ಪ್ರಕ್ರಿಯೆ ನಡೆದಿದೆ. ಅಲ್ಲದೆ, ತಜ್ಞರ ಸೇವಾನುಭವ ಆಧರಿಸಿ ವೇತನವನ್ನು 2.20 ಲಕ್ಷ ರೂ.ವರೆಗೆ ಹೆಚ್ಚಿಸುವ ಕುರಿತೂ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಡಿಸೆಂಬರ್ ಅಂತ್ಯಕ್ಕೆ ಈ ಕುರಿತು ನಿರ್ಧಾರವಾಗಲಿದೆ ಎಂದರು.

ಕಾಯಿಲೆ ತಡೆ ಸರ್ಕಾರದ ಜವಾಬ್ದಾರಿ: ಸಾಮಾನ್ಯ ವ್ಯಕ್ತಿ, ಮಧ್ಯಮ ವರ್ಗದವರು, ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗು ತ್ತಾರೆ. ದೇಶದ ಯಾವ ರಾಜ್ಯಗಳ ಸರ್ಕಾರಿ ಆಸ್ಪತ್ರೆಗಳಲ್ಲೂ ಶೇ.100 ಸೇವೆ ನೀಡುವು ದಕ್ಕೆ ಸಾಧ್ಯವಾಗಲ್ಲ. ಆರ್ಥಿಕ ಸಬಲರು, ತೀವ್ರ ಕಾಯಿಲೆಗಳಿಂದ ಬಳುತ್ತಿದ್ದವರು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ. ಮೂಲ ಆರೋಗ್ಯ, ಕಾಯಿಲೆಗಳನ್ನು ತಡೆಗಟ್ಟುವುದು ಸರ್ಕಾರದ ಜವಾಬ್ದಾರಿ. ಹಣಕಾಸು ಸೇರಿ ಎಲ್ಲ ಸಂಪನ್ಮೂಲಗಳನ್ನು ನೋಡಿ ಕೊಂಡು ಸೇವೆ ನೀಡಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು.

ಗೃಹ ಆರೋಗ್ಯದ ಸಾಧನೆ: ಗೃಹ ಆರೋಗ್ಯ ಯೋಜನೆಯಡಿ 14,228 ಮನೆಗಳಿಗೆ ಭೇಟಿ ನೀಡಲಾಗಿದ್ದು, 26,360 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. 311 ಅಧಿಕ ರಕ್ತದೊತ್ತಡ ಪ್ರಕರಣಗಳು ಹಾಗೂ 262 ಮಧುಮೇಹ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಬಾಯಿ ಕ್ಯಾನ್ಸರ್​ನಿಂದ ಬಳಲುತ್ತಿರುವ 141 ಮಂದಿ, ಸ್ತನ ಕ್ಯಾನ್ಸರ್ ಹೊಂದಿರುವ 38 ಮಂದಿ, ಗರ್ಭಕಂಠದ ಕ್ಯಾನ್ಸರ್ ಹೊಂದಿರುವ 5 ಮಂದಿ ಹಾಗೂ ಸ್ಲೀಪ್ ಆಪ್ನಿಯಾದಿಂದ ಬಳಲುತ್ತಿರುವ 51 ಮಂದಿಯನ್ನು ಪತ್ತೆ ಹಚ್ಚಲಾಗಿದೆ.

ಪುನೀತ್ ಹೃದಯ ಜ್ಯೋತಿ ಯಶಸ್ವಿ: 2023ರಲ್ಲಿ ಪ್ರಾರಂಭವಾಗಿ ಪುನೀತ್ ಹೃದಯ ಜ್ಯೋತಿ ಯೋಜನೆ ರಾಜ್ಯದ 71 ತಾಲೂಕು ಹಾಗೂ 15 ಜಿಲ್ಲಾ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ. ಇದರ ಅಡಿ ಹೃದಯಕ್ಕೆ ಸಂಬಂಧಿಸಿದ 10 ತೃತೀಯ ಮಟ್ಟದ ಸಮಗ್ರ ಚಿಕಿತ್ಸೆ ದೊರೆಯಲಿದೆ. ಯೋಜನೆಯಡಿಯಲ್ಲಿ ಈವರೆಗೂ 3,94,459 ಇಸಿಜಿ ಗಳನ್ನು ಮಾಡಲಾಗಿದ್ದು , 5,989 ತೀವ್ರವಾದ ಹೃದಯಾಘಾತದ ರೋಗಿಗಳನ್ನು ಪತ್ತೆ ಹಚ್ಚಿ, 3,788 ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. 8 ರೋಗಿಗಳಿಗೆ ಬೈಪಾಸ್ ಸರ್ಜರಿ ಮಾಡಲಾಗಿದೆ.

ಹಾವುಕಡಿತ ಸೂಚಿಸಬಹುದಾದ ರೋಗ: ಹಾವು ಕಡಿತ ಔಷಧ ಸರಬರಾಜು ಆಗಿಲ್ಲ. ಕೆಲವೆಡೆ ಔಷಧ ಜಾಸ್ತಿ ಇದ್ದರೆ, ಇನ್ನೂ ಕೆಲವೆಡೆ ಕಡಿಮೆ ಇದೆ. ಈ ಔಷಧವನ್ನು ಯಾವ ಆಧಾರದಲ್ಲಿ ಕೊಡಬಹುದು ಎಂಬುದರ ಬಗ್ಗೆ ರ್ಚಚಿಸಿದ್ದೇವೆ. ಹಾವು ಕಡಿತವನ್ನು ‘ಸೂಚಿಸಬಹುದಾದ ರೋಗವೆಂದು’ ಪರಿಗಣಿಸಲಾಗಿದೆ. ಆಯಾ ಜಿಲ್ಲೆಗಳಲ್ಲಿರುವ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೇಸ್​ಗಳ ಅಂಕಿ-ಅಂಶಗಳು ನಿಖರವಾಗಿ ದೊರೆಯಬೇಕು. ಇದರಿಂದಾಗಿ ಯಾವ ಜಿಲ್ಲೆಗಳಲ್ಲಿ ಅಧಿಕ ಕೇಸ್​ಗಳು ದಾಖಲಾದರೆ, ಆ ಜಿಲ್ಲೆಗೆ ಹಾವು ಕಡಿತದ ಔಷಧ ನೀಡುವುದಕ್ಕೆ ಸಹಕಾರಿಯಾಗಲಿದೆ. ಇದನ್ನು ಜಾರಿಗೆ ತರುವ ಬಗ್ಗೆ ಆಲೋಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ದಲ್ಲಿ ಔಷಧ ಪರೀಕ್ಷಿಸುವ ಪ್ರಯೋಗಾಲಯದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ಔಷಧಗಳ ಖರೀದಿಯಲ್ಲಿ ಸುಧಾರಣೆ ತರುವ ಪ್ರಯತ್ನ ನಡೆಯುತ್ತಿದೆ. ನಕಲಿ ಔಷಧಗಳು ತಡೆಗೆ ಕ್ರಮಕೈಗೊಳ್ಳಲಾಗುವುದು. ಸರಬರಾಜು ಮಾಡಿರುವ ಐವಿ ಫ್ಲೂಯಿಡ್ಸ್ ಬ್ಯಾಚ್ ಬಳಸದಂತೆ ಮೇನಲ್ಲಿ ಆದೇಶಿಸಲಾಗಿತ್ತು. ಕಳೆದ ವಾರವೂ ಮತ್ತೊಮ್ಮೆ ಆದೇಶ ಹೊರಡಿಸಲಾಗಿದೆ.

| ದಿನೇಶ್ ಗುಂಡೂರಾವ್ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net