ಮೆಗಾ ಹರಾಜಿಗೂ ಮುನ್ನ 03 ಸೀಸನ್​ಗಳ IPL Schedule ಪ್ರಕಟಿಸಿದ BCCI

web ipl retain
Published on

ಮುಂಬೈ: 18ನೇ ಆವೃತ್ತಿಯ ಐಪಿಎಲ್​ (IPL) ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ನವೆಂಬರ್​ 24-25ರಂದು ನಡೆಯಲಿರುವ ಮೆಗಾ ಹರಾಜು (Mega Auction) ಮೇಲೆ ಕಣ್ಣಿಟ್ಟಿದ್ದಾರೆ. ಈ ಬಾರಿಯ ಹರಾಜಿಗೆ 574 ಆಟಗಾರರು ನೋಂದಾಯಿಸಿಕೊಂಡಿದ್ದು, ಹಣದ ಹೊಳೆ ಹರಿಯುವುದು ಪಕ್ಕಾ ಎಂದು ಹೇಳಲಾಗಿದೆ.

ನವೆಂಬರ್​ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ (Jeddah) ಹರಾಜು ಕಾರ್ಯಕ್ರಮ ನಡೆಯಲಿದ್ದು, ವಿವಿಧ ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಖರೀದಿಸಲು ಲೆಕ್ಕಾಚಾರ ಹಾಕಿದ್ದು, ಮೆಗಾ ಹರಾಜು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಬಿಸಿಸಿಐ (BCCI) ಐಪಿಎಲ್​ ವೇಳಾಪಟ್ಟಿಯನ್ನು (IPL Schedule) ಬಿಡುಗಡೆ ಮಾಡಿದ್ದು, ಹಲವರಿಗೆ ಅಚ್ಚರಿಯನ್ನುಂಟು ಮಾಡಿದೆ.

ಇಂದು (ನವೆಂಬರ್​ 22) ಬಿಸಿಸಿಐ 2025ರ ಐಪಿಎಲ್​ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಜೊತೆಗೆ 2026 ಹಾಗೂ 2027ರ ವೇಳಾಪಟ್ಟಿಯನ್ನು ಸಹ ರಿಲೀಸ್​ ಮಾಡಿದೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಟೂರ್ನಿ ಹತ್ತಿರವಿರುವಾಗ ವೇಳಾಪಟ್ಟಿಯನ್ನು (Schedule) ಬಿಡುಗಡೆ ಮಾಡಲಾಗುತ್ತದೆ. ಆದರೆ, ಈ ಬಾರಿ ಮೂರು ಸೀಸನ್‌ಗಳ ವೇಳಾಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಬಿಸಿಸಿಐ (BCCI) ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ipl auction

2025ರ ಐಪಿಎಲ್ (IPL) ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಐಪಿಎಲ್‌ನ (IPL) ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ (Int Cricket Calender) ಅದರ ಸ್ಥಾಪಿತ ವಿಂಡೋವನ್ನು ಪ್ರತಿಬಿಂಬಿಸುತ್ತದೆ. ಇದು ಫ್ರಾಂಚೈಸಿಗಳು ಮತ್ತು ಆಟಗಾರರಿಗೆ ಯೋಜನೆಯನ್ನು ಹಾಕಿಕೊಳ್ಳಲು ಸಹಕಾರಿಯಾಗುತ್ತದೆ. ಮುಂದಿನ ಮೂರು ಐಪಿಎಲ್ ಸೀಸನ್‌ಗಳಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ಲಭ್ಯತೆಯನ್ನು ಬಿಸಿಸಿಐ ದೃಢಪಡಿಸಿದೆ. 

ಈ ಬಾರಿ ಐಪಿಎಲ್​ ಮೆಗಾ ಆಕ್ಷನ್‌ಗೆ ಒಟ್ಟು 574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 366 ಕ್ರಿಕೆಟಿಗರು ಭಾರತೀಯರಾಗಿದ್ದರೆ, ಉಳಿದ 208 ಆಟಗಾರರು ವಿದೇಶಿಗರು. ದಕ್ಷಿಣ ಆಫ್ರಿಕಾದಿಂದ ದಾಖಲೆ ಸಂಖ್ಯೆಯ ಆಟಗಾರರು ನೋಂದಣಿ ಮಾಡಿಕೊಂಡಿದ್ದು, 318 ಅನ್‌ಕ್ಯಾಪ್ಡ್ ಭಾರತೀಯ ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಕೂಡಾ ಐಪಿಎಲ್‌ ಆಡುವ ಉತ್ಸಾಹದಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಹರಾಜು ಕೂಗಿದ್ದ ಮಲ್ಲಿಕಾ ಸಾಗರ್​ (Mallika Sagar) ಈ ಬಾರಿ ಹರಾಜುದಾರರಾಗಿ ಮುಂದುವರೆಯಲಿದ್ದು, ಈ ಬಾರಿ ಮೆಗಾ ಹರಾಜು ಕಾರ್ಯಕ್ರಮದಲ್ಲಿ ತಂಡಗಳು ನಡುವೆ ಪೈಪೋಠಿ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಸ್ಟಾರ್​ ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net