ಬಿಲ್​ ಪಾವತಿಸದೆ ಎಸ್​ಪಿಬಿ ಅವರ ಪಾರ್ಥಿವ ಶರೀರ ಕೊಡಲ್ಲ ಎಂದರೇ ಆಸ್ಪತ್ರೆಯವರು?

SPB - Hospital Bill
Published on

ಚೆನ್ನೈ: ಶುಕ್ರವಾರ ನಿಧನರಾದ ಭಾರತದ ದಿಗ್ಗಜ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಶನಿವಾರವಷ್ಟೇ ಮುಗಿದಿದೆ. ಈ ಮಧ್ಯೆ, ಹೊಸ ವಿವಾದವೊಂದು ಹುಟ್ಟುಕೊಂಡಿದೆ.

ವಿಷಯವೇನೆಂದರೆ, ಆಗಸ್ಟ್​ 5ರಿಂದ ಒಂದೂವರೆ ತಿಂಗಳುಗಳ ಕಾಲ ಎಸ್​.ಬಿ. ಬಾಲಸುಬ್ರಹ್ಮಣ್ಯಂ ಅವರು ಚೆನ್ನೈ ಎಂ.ಜಿ.ಎಂ ಹೆಲ್ತ್​ಕೇರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಒಂದೂವರೆ ತಿಂಗಳ ಅವಧಿಯಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚಾಗಿತ್ತಂತೆ. ಎಸ್​ಪಿಬಿ ನಿಧನರಾದ ನಂತರ ಬಿಲ್​ ಪಾವತಿಸುವುದಕ್ಕೆ ಆಸ್ಪತ್ರೆಯ ಸಿಬ್ಬಂದಿಯವರು ಎಸ್​ಪಿಬಿ ಅವರ ಕುಟುಂಬದವರಿಗೆ ಹೇಳಿದರಂತೆ.

ಅಷ್ಟೇ ಅಲ್ಲ, ಬಿಲ್​ ಪಾವತಿಸುವವರೆಗೂ ಎಸ್​​ಪಿಬಿ ಅವರ ಪಾರ್ಥಿವ ಶರೀರವನ್ನು ಕೊಡುವುದಕ್ಕೆ ಹಿಂಜರಿದರಂತೆ. ಈ ಸಮಯದಲ್ಲಿ ಆಸ್ಪತ್ರೆಯವರು ಮತ್ತು ಎಸ್​ಪಿಬಿ ಕುಟುಂಬದವರ ನಡುವೆ ಮಾತಿನ ಚಕಮಕಿಯೂ ನಡೆಯಿತಂತೆ. ಕೊನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮಧ್ಯಸ್ಥಿಕೆಯ ನಂತರ ಆಸ್ಪತ್ರೆಯವರು ಕುಟುಂಬದವರಿಗೆ ಎಸ್​ಪಿಬಿ ಅವರ ಪಾರ್ಥಿವ ಶರೀರವನ್ನು ಒಪ್ಪಿಕೊಂಡರಂತೆ.

ಇಂಥದ್ದೊಂದು ಸುದ್ದಿ ಇದೀಗ ಎಲ್ಲೆಡೆ ಹರಡಿದ್ದು, ವಿಷಯ ಕಿವಿಗೆ ಬೀಳುತ್ತಿದ್ದಂತೆ ಎಸ್​ಪಿಬಿ ಅವರ ಮಗ ಚರಣ್ ಇದನ್ನು ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಅವರು, ‘ಎಸ್​ಪಿಬಿ ಅವರ ಸಾವಿನ ಕುರಿತು ಜನ ಈ ರೀತಿ ಸುಳ್ಳುಸುದ್ದಿ ಹಬ್ಬಿಸುವುದನ್ನು ನೋಡಿ ಬೇಸರವಾಗುತ್ತದೆ. ಅವರು ಎಸ್​ಪಿಬಿ ಅವರ ಅಭಿಮಾನಿಗಳಾಗಿರುವುದಕ್ಕೆ ಸಾಧ್ಯವೇ ಇಲ್ಲ. ಈ ತರಹ ಸುದ್ದಿ ಹಬ್ಬಿಸಿದವರಿಗೆ ಎಸ್​ಪಿಬಿ ಅವರಿಗೆ ಯಾವ ತರಹದ ಚಿಕಿತ್ಸೆ ನೀಡಲಾಗಿತ್ತು, ಬಿಲ್​ ಎಷ್ಟಾಗಿತ್ತು ಮತ್ತು ಆ ಹಣವನ್ನು ಯಾರು ತುಂಬಿದರು ಎಂಬ ವಿಷಯ ಗೊತ್ತಿರುವುದಕ್ಕೆ ಸಾಧ್ಯವೇ ಇಲ್ಲ. ಈ ಕುರಿತು ನಾನು ಯಾವುದೇ ವಿಷಯ ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ. ಸದ್ಯದಲ್ಲೇ ಆಸ್ಪತ್ರೆಯವರೊಂದಿಗೆ ಪತ್ರಿಕಾಗೋಷ್ಠಿ ಮಾಡಿ, ಎಲ್ಲಾ ವಿಷಯಗಳನ್ನೂ ತಿಳಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net