ಗಣೇಶ್​ ಜತೆ 'ತ್ರಿಬಲ್​ ರೈಡ್​' ಗೆ ಹೊರಟ 'ಜೊತೆ ಜೊತೆಯಲಿ' ಹೀರೋಯಿನ್​

Meghashree 27 sept
Published on

ಬೆಂಗಳೂರು: ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಮೋಡಿ ಮಾಡಿರುವ ನಟಿ ಮೇಘಶ್ರೀ ಶೆಟ್ಟಿ, ಇದೀಗ ಬೆಳ್ಳಿತೆರೆ ಮೇಲೂ ಮಿಂಚಲು ಸಜ್ಜಾಗಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಮಿನುಗಲು ಚೊಚ್ಚಲ ಸಿನಿಮಾ ಅವಕಾಶ ಅವರಿಗೆ ಸಿಕ್ಕಿದ್ದು, ಇನ್ನೇನು ಶೂಟಿಂಗ್​ನಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಗಣೇಶ್ ನಟಿಸಲಿರುವ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೆ ನಾಯಕಿಯಾಗಿ ಮೇಘಶ್ರೀ ಶೆಟ್ಟಿ ಆಯ್ಕೆಯಾಗಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ನಿಭಾಯಿಸಿರುವ ಮೇಘಶ್ರೀ, ಆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಆ ಜನಪ್ರಿಯತೆಯ ಆಧಾರದ ಮೇಲೆ ಚಂದನವನಕ್ಕೆ ಕಾಲಿರಿಸಿದ್ದಾರೆ. ಅಕ್ಟೋಬರ್​ನಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಈಗಾಗಲೇ ಹೈದರಾಬಾದ್​ನಲ್ಲಿ ಹಾಡುಗಳ ಧ್ವನಿ ಮುದ್ರಣ ಸಹ ನಡೆಯುತ್ತಿದೆ. ಕಾಮಿಡಿ ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ಈ ಹಿಂದೆ ವಿನೋದ್ ಪ್ರಭಾಕರ್​ಗೆ ‘ರಗಡ್’ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಗೌಡ ತ್ರಿಬಲ್ ರೈಡಿಂಗ್ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಮಹೇಶ್​ಗೆ ಆಗಿನಿಂದಲೂ ಗಣೇಶ್​ಗೆ ಚಿತ್ರ ನಿರ್ದೇಶಿಸುವ ಆಸೆ ಇತ್ತು. ಅದೀಗ ಈ ಸಿನಿಮಾ ಮೂಲಕ ಈಡೇರಿದ್ದು, ಕೃಪಾಳು ಎಂಟರ್​ಟೈನ್​ವೆುಂಟ್​ನ ರಾಮ್ ಗೋಪಾಲ್ ವೈ ಎಂ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಸಾಯಿಕಾರ್ತಿಕ್ ಸಂಗೀತ ನಿರ್ದೇಶನ, ಆನಂದ್ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ಗಣೇಶ್, ಮೇಘಶ್ರೀ ಜತೆಗೆ ಸಾಧು ಕೋಕಿಲ, ರವಿಶಂಕರ್ ಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net