ಪುತ್ತೂರು ಗ್ರಾಮಾಂತರ: ಜಾಗದ ವಿವಾದದ ಹಿನ್ನೆಲೆಯಲ್ಲಿ ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಸಂಪ್ಯದಮೂಲೆ ನಿವಾಸಿ ಹಸೈನಾರ್ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಸಂಪ್ಯ ಠಾಣೆಯ ಪೊಲೀಸರು ಆಸ್ಪತ್ರೆಗೆ ತೆರಳಿ ಹೇಳಿಕೆ ಪಡೆದುಕೊಂಡು, ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ರಾಹಿಂ ತನ್ನ ಜಮೀನಿಗೆ ಹೋಗಿದ್ದ ವೇಳೆ ಪಕ್ಕದ ನಿವಾಸಿಗಳಾದ ರೇಖನಾಥ ರೈ, ಅವರ ಅಕ್ಕ ಪುಷ್ಪಾವತಿ, ಬಾವ ಜೀವನ್, ಸಹೋದರ ನಾರಾಯಣ ರೈ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ರೇಖಾನಾಥ ರೈ ತಲುವಾರಿನಿಂದ ಕಡಿದು ಹಲ್ಲೆ ನಡೆಸಿರುವುದಾಗಿ ಇಬ್ರಾಹಿಂ ಸಹೋದರ ಹಸೈನಾರ್ ದೂರಿನಲ್ಲಿ ತಿಳಿಸಿದ್ದಾರೆ.
ರೇಖನಾಥ ರೈ ಮತ್ತು ನಾನು ನಮ್ಮ ಜಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸ್ಥಳೀಯರಾದ ಹಸೈನಾರ್ ಎಂಬುವರು ಬಂದು ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ನಾವು ತಪ್ಪಿಸಿಕೊಂಡಿರುವುದಾಗಿ ಪುಷ್ಪಾವತಿ ರೈ ಅವರು ಈ ಹಿಂದೆ ದೂರು ನೀಡಿದ್ದರು. ಸಂಪ್ಯ ಪೊಲೀಸರು ಹಸೈನಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.