

South Korea: ಜನನ ಪ್ರಮಾಣ ದರದಲ್ಲಿ ಭಾರೀ ಕುಸಿತ ಕಂಡ ರಾಷ್ಟ್ರಗಳ ಪೈಕಿ ದಕ್ಷಿಣ ಕೊರಿಯಾ ಹೆಸರು ಮುಂಚೂಣಿಯಲ್ಲಿತ್ತು. ದೇಶದಲ್ಲಿ ಶಿಶುಗಳ ಜನನ ಪ್ರಮಾಣ ಸಂಪೂರ್ಣವಾಗಿ ನೆಲಕಚ್ಚಿತ್ತು. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕೊರಿಯಾದಲ್ಲಿ ಇದೀಗ ಹೊಸ ಬೆಳವಣಿಗೆ ಹಾಗೂ ಬದಲಾವಣೆ ಕಂಡುಬಂದಿರುವುದು ಸದ್ಯ ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.
ಶುಕ್ರವಾರ (ಜ.03) ಸರ್ಕಾರ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ, ಕಳೆದ ಒಂಬತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದಲ್ಲಿ ನವಜಾತ ಶಿಶುಗಳ ಸಂಖ್ಯೆ ಹೆಚ್ಚಾಗಿದೆ. ಸೌತ್ ಕೊರಿಯಾ ವಿಶ್ವದ ಅತ್ಯಂತ ಕಡಿಮೆ ಫಲವತ್ತತೆ ಪ್ರಮಾಣ ಎದುರಿಸುತ್ತಿದ್ದ ದೇಶಗಳಲ್ಲಿ ಒಂದಾಗಿತ್ತು. ಇಂತಹ ಪಟ್ಟಿಯಲ್ಲಿದ್ದ ರಾಷ್ಟ್ರಕ್ಕೆ ಇದು ನಿಜಕ್ಕೂ ಗಮನಾರ್ಹ ಬದಲಾವಣೆಯನ್ನೇ ಸೂಚಿಸಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಆಂತರಿಕ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ನಿವಾಸಿ ನೋಂದಣಿ ದತ್ತಾಂಶವು 2024ರಲ್ಲಿ 2,42,334 ಶಿಶುಗಳು ಜನಿಸಿದ್ದು, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.3.1ರಷ್ಟು ಏರಿಕೆಯನ್ನು ತೋರಿಸುತ್ತದೆ. ಸತತ ಎಂಟು ವರ್ಷಗಳ ಜನನ ಪ್ರಮಾಣ ಕುಸಿತದಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಕಂಡಿರುವುದು. ಇದು ಮೊದಲ ವಾರ್ಷಿಕ ಹೆಚ್ಚಳ ಎಂದು ಹೇಳಿದೆ. ಕಳೆದ ಡಿಸೆಂಬರ್ 24ರಂದು, ದಕ್ಷಿಣ ಕೊರಿಯಾ ಅಧಿಕೃತವಾಗಿ "ಸೂಪರ್-ಏಜ್ಡ್" ಸಮಾಜವನ್ನು ತಲುಪಿತು. ಸರ್ಕಾರದ ಅಂಕಿಅಂಶಗಳ ಪ್ರಕಾರ, 65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಜನಸಂಖ್ಯೆಯ ಐದನೇ ಒಂದು ಭಾಗವನ್ನು ಹೊಂದಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕೊರಿಯಾದ ಆಂತರಿಕ ಮತ್ತು ಸುರಕ್ಷತೆ ಸಚಿವಾಲಯವು, ದೇಶದಲ್ಲಿ 10.24 ಮಿಲಿಯನ್ ಜನರು ಈಗ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ,(ಏಜೆನ್ಸೀಸ್).