ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ! ರೋಜರ್ ಬಿನ್ನಿ ಜಾಗಕ್ಕೆ ಇವರನ್ನೇ ಕರೆತರಲು ನಿರ್ಧಾರ? | BCCI

ವಿಜಯವಾಣಿ - 2025-06-01T133952.350
Published on

BCCI: ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆಯುವ ಮುನ್ಸೂಚನೆ ಲಭಿಸಿದೆ. ಈ ವರ್ಷದ ಜುಲೈನಲ್ಲಿ ರೋಜರ್ ಬಿನ್ನಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಅವರ ಸ್ಥಾನಕ್ಕೆ ಯಾರನ್ನು ಕರೆತರಬೇಕು ಎಂಬ ಪ್ರಶ್ನೆಗೆ ಕೇಳಿಬಂದಿರುವ ಹೆಸರು ಸದ್ಯ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಸಿಸಿಐ ನಿಯಮಗಳ ಪ್ರಕಾರ, 70 ವರ್ಷ ಪೂರೈಸಿದ ನಂತರ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡಬೇಕು. ಅಂತೆಯೇ ಈ ವರ್ಷ ಜುಲೈ 19ರಂದು ಬಿನ್ನಿ ಅವರು 70 ವರ್ಷಕ್ಕೆ ಕಾಲಿಡಲಿದ್ದಾರೆ. ರೋಜರ್ ಸ್ವತಃ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು 'ಕ್ರಿಕ್‌ಬ್ಲಾಗರ್‌'ಗೆ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ನೂತನ ಬಿಸಿಸಿಐ ಅಧ್ಯಕ್ಷರನ್ನಾಗಿ ಪ್ರಸ್ತುತ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಅವರನ್ನೇ ಆಯ್ಕೆ ಮಾಡಲು ಮಂಡಳಿ ಚಿಂತನೆ ನಡೆಸಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ವಿಷಯದ ಬಗ್ಗೆ ಮಂಡಳಿಯೊಳಗೆ ಆಂತರಿಕವಾಗಿ ಚರ್ಚೆಗಳು ನಡೆಯುತ್ತಿವೆ ಎಂದು ವರದಿಗಳು ಹೇಳಿವೆ. 1983ರ ವಿಶ್ವಕಪ್ ವಿಜೇತ ರೋಜರ್ ಬಿನ್ನಿ 2022ರಲ್ಲಿ ಗಂಗೂಲಿ ಬದಲಿಗೆ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈಗ ಅವರ ಸ್ಥಾನಕ್ಕೆ ರಾಜೀವ್ ಹೆಸರು ಕೇಳಿಬಂದಿದೆ. ಶುಕ್ಲಾ ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಈ ಹಿಂದೆ ಐಪಿಎಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಂಬರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶುಕ್ಲಾ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net