

PBKS vs MI Qualifier 2: ಐಪಿಎಲ್ 18ನೇ ಆವೃತ್ತಿ ಇದೀಗ ಕೊನೆಯ ಘಟ್ಟ ತಲುಪಿದ್ದು, ಇಂದು (ಜೂನ್.01) ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ. ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಜಿದ್ದಾಜಿದ್ದಿಯಲ್ಲಿ ಯಾವ ತಂಡ ಜಯಭೇರಿ ಆಗಲಿದೆಯೋ, ಆ ತಂಡ ಫೈನಲ್ನಲ್ಲಿ ಆರ್ಸಿಬಿ ಎದುರು ಐಪಿಎಲ್ ಟ್ರೋಫಿಗಾಗಿ ಸೆಣಸಲಿದೆ.
ಇಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗೆದ್ದ ತಂಡ ಫೈನಲ್ನಲ್ಲಿ ರಜತ್ ಪಟೀದಾರ್ ಪಡೆಯನ್ನು ಎದುರಿಸಲಿದೆ. ಅಸಲಿಗೆ ಆರ್ಸಿಬಿ ಎದುರು ಪೈಪೋಟಿಗಿಳಿಯುವ ಬಲಿಷ್ಠ ತಂಡ ಯಾವುದು ಎಂಬುದೇ ಸದ್ಯ ಕ್ರಿಕೆಟ್ ಪ್ರೇಮಿಗಳ ಕೌತುಕದ ಪ್ರಶ್ನೆ. ಈ ಸಂದರ್ಭದಲ್ಲಿ, ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಬೀಗಲು ಎದುರುನೋಡುತ್ತಿವೆ.
ಅಹಮದಾಬಾದ್ ಮೈದಾನ ಬ್ಯಾಟರ್ಗಳಿಗೆ ಉತ್ತಮ ಅವಕಾಶ. ಕಾರಣ, ಇದೊಂದು ಬ್ಯಾಟಿಂಗ್ ಪಿಚ್ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳು 200ಕ್ಕೂ ಹೆಚ್ಚು ಸ್ಕೋರ್ಗಳನ್ನು ಗಳಿಸಿವೆ. ಔಟ್ಫೀಲ್ಡ್ ವೇಗವಾಗಿದೆ. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಐಪಿಎಲ್ ಇತಿಹಾಸದಲ್ಲಿ, ಇಲ್ಲಿಯವರೆಗೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ 33 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ, ಪಂಜಾಬ್ 15 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 17 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾ ಆಗಿದೆ. ಇಂದಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಯಾರು ರೋಚಕ ಗೆಲುವು ಸಾಧಿಸಿ, ಫೈನಲ್ಗೆ ಲಗ್ಗೆಯಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).