

ಹೈದರಾಬಾದ್: ಕಳೆದ ವರ್ಷದ ಆಗಸ್ಟ್ನಲ್ಲಿ ಆನ್ಲೈನ್ ಕ್ಲಾಸ್ಗಳು ಶುರುವಾದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಮೊಬೈಲ್ ಫೋನ್ಗಳನ್ನು ಕೊಟ್ಟಿದ್ದರು ಬಾಲಿವುಡ್ ನಟ ಸೋನು ಸೂದ್. ಇದೀಗ ಅವರು ಮತ್ತೊಮ್ಮೆ ನೂರು ಸ್ಮಾರ್ಟ್ಫೋನ್ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ.
ಇದನ್ನೂ ಓದಿ: ವಸಿಷ್ಠ ಸಿಂಹ ಹೆಸರಿನಲ್ಲೊಂದು ಕ್ಯಾಲೆಂಡರ್
'ಮೆಗಾಸ್ಟಾರ್' ಚಿರಂಜೀವಿ ಅಭಿನಯದ 'ಆಚಾರ್ಯ' ಎಂಬ ತೆಲುಗು ಚಿತ್ರದಲ್ಲಿ ಸೋನು ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರಬಹುದು. ಹೈದರಾಬಾದ್ನ ಕೊಕಾಪೇಟ್ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಸೋನು ಉಚಿತ ಮೊಬೈಲ್ ಫೋನ್ಗಳನ್ನು ಕೊಟ್ಟಿದ್ದಾರೆ.
'ಆಚಾರ್ಯ' ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಲವು ದಿನಗೂಲಿ ನೌಕರರ ಬಳಿ ಸ್ಮಾರ್ಟ್ಫೋನ್ಗಳಿಲ್ಲ ಎಂಬುದು ಸೋನುಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಆ ಕಾರ್ಮಿಕರ ಮಕ್ಕಳಿಗೆ ಸ್ಮಾರ್ಟ್ಫೋನ್ ಇಲ್ಲದೆ ಆನ್ಲೈನ್ ಶಿಕ್ಷಣ ಪಡೆಯುವುದಕ್ಕೆ ಕಷ್ಟಪಡುತ್ತಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದಿದೆ. ತಕ್ಷಣವೇ ನೂರು ಮೊಬೈಲ್ಫೋನ್ಗಳನ್ನು ಆರ್ಡರ್ ಮಾಡಿದ ಸೋನು, ಅದನ್ನೆಲ್ಲಾ ಇತ್ತೀಚೆಗೆ ಚಿತ್ರದಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಷಯದ ಬಗ್ಗೆ ಗೊತ್ತಿಲ್ಲದ ಕಾರ್ಮಿಕರಿಗೆ, ಸೋನು ಕರೆಯುತ್ತಿದ್ದಾರಂತೆ ಎಂದು ಗೊತ್ತಾದಾಗ ಆಶ್ಚರ್ಯವಾಯಿತಂತೆ. ಕೊನೆಗೆ ಹೋಗಿ ಭೇಟಿಯಾದಾಗ, ಸ್ಮಾರ್ಟ್ಫೋನ್ಗಳನ್ನು ಹಂಚುತ್ತಿರುವ ವಿಷಯ ಗೊತ್ತಾಗಿದೆ. ಮೊಬೈಲ್ ಪಡೆದ ಕಾರ್ಮಿಕರು, ಸೋನು ಅವರನ್ನು ಮನಸಾರೆ ಹರಿಸಿ-ಹಾರೈಸಿ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.