

ಬೆಂಗಳೂರು: 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರಿಗೆ ಫೇಸ್ಬುಕ್ನಲ್ಲಿ ಲೈವ್ ಬರುವುದು ಹೊಸ ವಿಷಯವೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಲೈವ್ ಬರದೆ ಬಹಳ ಸಮಯವೇ ಆಗಿತ್ತು. ಈಗ ಬಹಳ ದಿನಗಳ ನಂತರ ಅವರು ಲೈವ್ ಬಂದು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕೆ ಸಜ್ಜಾಗಿದ್ದಾರೆ.
ಈ ವಿಷಯವಾಗಿ ದರ್ಶನ್ ಅಭಿಮಾನಿ ಸಂಘವಾದ ಡಿ ಕಂಪೆನಿ ಅಫೀಷಿಯಲ್ ಕಡೆಯಿಂದ ಪ್ರಕಟಣೆ ಹೊರಬಿದ್ದಿದೆ. ಅದರ ಪ್ರಕಾರ, ದರ್ಶನ್ ಅವರು ಇದೇ ಭಾನುವಾರ ಅಂದರೆ ಜನವರಿ 10ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಲೈವ್ ಬರಲಿದ್ದಾರೆ. ಆ ಸಮಯದಲ್ಲಿ ಅಭಿಮಾನಿಗಳು ಅವರ ಜತೆಗೆ ಚರ್ಚೆ ಮಾಡಬಹುದಾಗಿದೆ.
ಎಲ್ಲಾ ಸರಿ, ದರ್ಶನ್ ಅವರ ಫೇಸ್ಬುಕ್ ಪೇಜ್ ಹೆಸರೇನು ಎಂದು ಗೊತ್ತಿಲದ್ದವರು ಕೇಳಬಹುದು. ದರ್ಶನ್ ಅವರು ತಮ್ಮ ನಿಮ್ಮ ಪ್ರೀತಿಯ ದಾಸ ದರ್ಶನ್ ಪೇಜ್ನಲ್ಲಿ ಲೈವ್ ಬಂದು, ಹಲವು ವಿಷಯಗಳ ಕುರಿತಾಗಿ ಅಭಿಮಾನಿಗಳ ಜತೆಗೆ ಮಾತನಾಡಲಿದ್ದಾರೆ.
ಅಂದಹಾಗೆ, ದರ್ಶನ್ ಇನ್ನಷ್ಟೇ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದ್ದು, ಸದ್ಯದಲ್ಲೇ 'ರಾಜವೀರ ಮದಕರಿ ನಾಯಕ' ಚಿತ್ರದ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ.