

ಮುಂಬೈ: ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಘೋಷಣೆ ಆಗಿದೆ. ತಾಂತ್ರಿಕ ವರ್ಗದ ಒಬ್ಬೊಬ್ಬರೆ ಈ ಸಿನಿಮಾಕ್ಕೆ ಆಯ್ಕೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರು ತಂಡ ಸೇರ್ಪಡೆಗೊಂಡಿದ್ದಾರೆ. ಇದೀಗ ತಾರಾಬಳಗದ ವಿಚಾರವೊಂದು ಸುದ್ದಿಯಲ್ಲಿದೆ. ಅದೇನೆಂದರೆ ಬಾಲಿವುಡ್ನ ಸ್ಟಾರ್ ನಟ ಜಾನ್ ಅಬ್ರಾಹಂ ಸಲಾರ್ನಲ್ಲಿ ನೆಗೆಟಿವ್ ಪಾತ್ರ ಮಾಡಲಿದ್ದಾರಂತೆ.
ಹೌದು, ಹೀಗೊಂದು ಸುದ್ದಿ ಇದೀಗ ಸದ್ದು ಮಾಡುತ್ತಿದೆ. ಪ್ರಭಾಸ್ ಗೆ ಎದುರಾಗಿ ಜಾನ್ ಅಬ್ರಹಾಂ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಗರಿಗೆದರಿದೆ. ಈಗಾಗಲೇ ಸಲಾರ್ ಟೀಮ್ ಜಾನ್ ಅಬ್ರಹಂ ಟೀಮ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆಯಂತೆ. ಆದರೆ, ಅಂತಿಮ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಇನ್ನು ಈ ಹಿಂದೆ ಇದೇ ಚಿತ್ರದ ನಾಯಕಿ ವಿಚಾರವೂ ಮುನ್ನೆಲೆಗೆ ಬಂದಿತ್ತು. ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾಣಿ ಪ್ರಭಾಸ್ಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪೋಸ್ಟರ್ ಮತ್ತು ಶೀರ್ಷಿಕೆಯ ಮೂಲಕ ಭಾರೀ ಟ್ರೆಂಡ್ ಸೃಷ್ಟಿಸಿದ್ದ ಸಲಾರ್ ಚಿತ್ರವನ್ನು ಇಂಡಿಯನ್ ಸಿನಿಮಾ ಎಂದು ನಿರ್ಮಾಪಕರು ಘೋಷಿಸಿಕೊಂಡಿದ್ದಾರೆ. ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಬಗ್ಗೆಯೂ ಈಗಾಗಲೇ ಹೊಂಬಾಳೆ ನಿರ್ಮಾಣ ಸಂಸ್ಥೆ ಹೇಳಿಕೊಂಡಿದ್ದು, 100 ಕೋಟಿಗೂ ಅಧಿಕ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ. (ಏಜೆನ್ಸೀಸ್)